ಮುಂಬೈ: ಭೀಮಾ ಕೊರೆಂಗಾವ್ ಹಿಂಸಾಚಾರ ಪ್ರಕರಣದಲ್ಲಿ ಕಳೆದ 3 ವರ್ಷಗಳಿಂದ ಜೈಲಿನಲ್ಲಿದ್ದ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಇಂದು ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಡಿ.1 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಡೀಫಾಲ್ಟ್ ಜಾಮೀನಿಗೆ ತಡೆ ನೀಡುವಂತೆ ಎನ್‌ಐಎ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು. ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್‌ಆರ್ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ತ್ರಿಸದಸ್ಯ ಪೀಠ ಸುಧಾ ಭಾರದ್ವಾಜ್ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶ ನೀಡಿತ್ತು. ಕೋರ್ಟ್‌ನ ಆದೇಶದ ಮೆರೆಗೆ ಪ್ರಕ್ರಿಯೆಗಳು ಪೂರ್ಣಗೊಳಿಸಿ ಇಂದು ಸುಧಾ ಅವರು ಜೈಲಿನಿಂದ ಹೊರ ಬಂದಿದ್ದಾರೆ.
60 ವರ್ಷದ ಸುಧಾ ಭಾರದ್ವಾಜ್ ತಮ್ಮ ಪಾಸ್‌ಪೋರ್ಟ್ ಸಲ್ಲಿಸಬೇಕು, ಮುಂಬೈಯಿಂದ ಹೊರಗಡೆ ಹೋಗಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ವಿಶೇಷ ಎನ್‌ಐಎ ಕೋರ್ಟ್ ಜಾಮೀನು ನೀಡಿತ್ತು. 2018ರ ಆಗಸ್ಟ್ 28 ರಂದು ಸುಧಾ ಭಾರದ್ವಾಜ್ ಅವರನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಯಿತು. ನಂತರ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: Elgar Parishad case : ಹೋರಾಟಗಾರ್ತಿ ಸುಧಾ ಭಾರದ್ವಾಜ್ಗೆ ಜಾಮೀನು