ಪ್ರತಿವರ್ಷ ಜೂನ್ 14 ರಂದು ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಸುರಕ್ಷಿತವಾಗಿ ರಕ್ತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಲಕ್ಷಾಂತರ ಜನರ ಜೀವ ಕಾಪಾಡುವ ರಕ್ತದಾನಿಗಳಿಗೆ ಅಭಿನಂದನೆ ಸಲ್ಲಿಸಲು 2004 ರಿಂದ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಎ,ಬಿ ಮತ್ತು ಓ ರಕ್ತದ ಗುಂಪುಗಳನ್ನು ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದು, ಅದೇ ಸಾಧನೆಗಾಗಿ ನೋಬೆಲ್ ಪ್ರಶಸ್ತಿ ಪಡೆದ ಖ್ಯಾತ ವಿಜ್ಞಾನಿ ಕಾರ್ಲ್ ಲ್ಯಾಂಡಸ್ಟೀನರ್ ನೋನ್ ಅವರು 1868ರ ಜೂನ್ 14 ರಂದು ಜನ್ಮ ತಾಳಿದ್ದರು. ಅವರ ಜನ್ಮದಿನದಂದೇ ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮೂರು ರಕ್ತದ ಗುಂಪುಗಳನ್ನು ಕಂಡು ಹಿಡಿದು ಮಾನವತೆಗೆ ಬಹುದೊಡ್ಡ ಕೊಡುಗೆ ನೀಡಿದ ವಿಜ್ಞಾನಿ ಕಾರ್ಲ್ ಅವರಿಗೂ ಈ ಮೂಲಕ ವಿಶ್ವ ಸಮುದಾಯ ಗೌರವಾರ್ಪಣೆಗಳನ್ನು ಸಲ್ಲಿಸಿದೆ.
ವಿಶ್ವಾದ್ಯಂತ ರಕ್ತದಾನದ ಕುರಿತು ಪ್ರಮುಖ ಅಂಕಿ ಅಂಶಗಳು: ವಾರ್ಷಿಕವಾಗಿ ಜಗತ್ತಿನಲ್ಲಿ ಒಟ್ಟು 118.5 ಸಂಖ್ಯೆಯ ರಕ್ತದಾನ ಮಾಡಲಾಗುತ್ತದೆ. ಇದರಲ್ಲಿ ಶೇ 40 ರಷ್ಟು ರಕ್ತದಾನಗಳು ಅತಿ ಹೆಚ್ಚು ಆದಾಯದ ದೇಶಗಳಲ್ಲಿಯೇ ನಡೆಯುತ್ತವೆ. ಈ ಅತಿ ಹೆಚ್ಚು ಆದಾಯದ ದೇಶಗಳು ವಿಶ್ವದ ಶೇ 16 ರಷ್ಟು ಜನಸಂಖ್ಯೆಯನ್ನು ಹೊಂದಿವೆ ಎಂಬುದು ಗಮನಿಸಬೇಕಾದ ಸಂಗತಿ.
ಕಡಿಮೆ ಆದಾಯದ ದೇಶಗಳಲ್ಲಿ ಶೇ 54 ರಷ್ಟು ರಕ್ತವನ್ನು 5 ವರ್ಷಕ್ಕೂ ಕೆಳಗಿನ ಮಕ್ಕಳಿಗೇ ನೀಡಲಾಗುತ್ತದೆ. ಆದರೆ ಹೆಚ್ಚು ಆದಾಯದ ದೇಶಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚು ಪ್ರಮಾಣದಲ್ಲಿ ರಕ್ತ ನೀಡಲಾಗುತ್ತದೆ.
ಪ್ರತಿ 1000 ಸಾವಿರ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ, ಹೆಚ್ಚು ಆದಾಯದ ದೇಶಗಳಲ್ಲಿ 31.5, ಮಧ್ಯಮ ಆದಾಯದ ದೇಶಗಳಲ್ಲಿ 15.9, ಕಡಿಮೆ ಮಧ್ಯಮ ಆದಾಯದ ದೇಶಗಳಲ್ಲಿ 6.8 ರಷ್ಟು ಹಾಗೂ ಅತಿ ಕಡಿಮೆ ಆದಾಯದ ದೇಶಗಳಲ್ಲಿ 5 ರಷ್ಟು ಜನ ರಕ್ತದಾನ ಮಾಡುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಯಾವುದೇ ಹಣ ಅಥವಾ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವವರ ಸಂಖ್ಯೆ 2013 ರಿಂದ 2018 ರ ಅವಧಿಯಲ್ಲಿ 7.8 ಮಿಲಿಯನ್ನಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ಒಟ್ಟು ಸ್ವಯಂಪ್ರೇರಿತ ರಕ್ತದಾನದ ಪೈಕಿ ಶೇ 90 ರಷ್ಟನ್ನು 79 ದೇಶಗಳಲ್ಲಿ ಸಂಗ್ರಹಿಸಲಾಗುತ್ತದೆ.
ರಕ್ತದ ಕೊರತೆ ನೀಗಿಸಲು ಎಷ್ಟು ಸಂಖ್ಯೆಯ ಜನ ರಕ್ತದಾನ ಮಾಡಬೇಕು?
- ಯಾವುದೇ ದೇಶದಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಬೇಕಾದರೆ ಆ ದೇಶದ ಪ್ರತಿ 1000 ಜನರಲ್ಲಿ 10 ರಿಂದ 20 ಜನ ಪ್ರತಿವರ್ಷ ರಕ್ತದಾನ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸರಕಾರಿ ಅಂಕಿ ಸಂಖ್ಯೆಗಳ ಪ್ರಕಾರ ಪ್ರತಿ 1000 ಜನರ ಪೈಕಿ ರಕ್ತದಾನ ಮಾಡುವ ಸಾಮರ್ಥ್ಯವಿರುವ 34 ಜನ ವರ್ಷಕ್ಕೊಮೆಯಾದರೂ ರಕ್ತದಾನ ಮಾಡಿದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಯಾವುದೇ ರೀತಿಯಿಂದ ರಕ್ತದ ಕೊರತೆ ಕಾಡದು ಎಂದು ಹೇಳಲಾಗಿದೆ.
- ಒಂದು ದೇಶದ ಕನಿಷ್ಠ ಶೇ 1 ರಷ್ಟು ಜನತೆ ರಕ್ತದಾನ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ರಕ್ತದಾನದ ಮಹತ್ವ
ವ್ಯಕ್ತಿಗಳು ಹಾಗೂ ಸಮುದಾಯಕ್ಕೆ ಅಗತ್ಯ ತುರ್ತು ಸಂದರ್ಭಗಳಲ್ಲಿ ಸುರಕ್ಷಿತ ಹಾಗೂ ಗುಣಮಟ್ಟ ಖಾತರಿಯ ರಕ್ತ ಸಿಗುವಂತಾಗಬೇಕಾದರೆ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದು ಅತಿ ಅಗತ್ಯ. ಹೀಗಾಗಿ ಆರೋಗ್ಯವಂತರು ಸ್ವಯಂಪ್ರೇರಿತರಾಗಿ ಆದಷ್ಟೂ ಹೆಚ್ಚು ರಕ್ತದಾನ ಮಾಡಲು ಮುಂದಾಗಬೇಕೆಂದು ರಕ್ತದಾನಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ಪುನಃ ಕರೆ ನೀಡಲಾಗಿದೆ.
ಸರಕಾರ, ಆರೋಗ್ಯ ಸಂಸ್ಥೆಗಳು ಸಹ ಸ್ವಯಂಪ್ರೇರಿತ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲು ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಸದಾ ಸಿದ್ಧವಾಗಿಡಬೇಕಾಗುತ್ತದೆ.
ಭಾರತಕ್ಕೆ ಕಾಡುತ್ತಿರುವ ರಕ್ತದಾನಿಗಳ ಕೊರತೆ
ಭಾರತವು ವಿಶ್ವದ ಅತಿ ಹೆಚ್ಚು ರಕ್ತದ ಕೊರತೆ ಅನುಭವಿಸುತ್ತಿರುವ ದೇಶವಾಗಿದೆ. ಪ್ರತಿವರ್ಷ ಅಗತ್ಯಕ್ಕಿಂತ 41 ಮಿಲಿಯನ್ ಯುನಿಟ್ ರಕ್ತದ ಕೊರತೆ ದೇಶಕ್ಕೆ ಕಾಡುತ್ತಿದೆ. ಅಂದರೆ ಲಭ್ಯ ರಕ್ತದ ಪ್ರಮಾಣಕ್ಕಿಂತ ಬೇಡಿಕೆಯು ಶೇ 400 ಕ್ಕಿಂತಲೂ ಹೆಚ್ಚಾಗಿದೆ.