ಅಹಮದಾಬಾದ್ : ಲಾಕ್ ಡೌನ್ ಅವಧಿಯಲ್ಲಿ ವೇತನ ಪಾವತಿಸದಿದ್ದಕ್ಕಾಗಿ ಮತ್ತು ಮಾರ್ಚ್ 28 ರಿಂದ ಮನೆಗೆ ಹೋಗಲು ಅನುಮತಿ ನೀಡದ ಕಾರಣ ಅಹಮದಾಬಾದ್ನ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ (ಐಐಎಂ-ಎ) ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡ ನಿರ್ಮಾಣದಲ್ಲಿ ನಿರತರಾಗಿದ್ದ ವಲಸೆ ಕಾರ್ಮಿಕರು ನಿರ್ದೇಶಕ ಪ್ರೊ. ಎರ್ರೋಲ್ ಡಿಸೋಜಾ ಅವರಿಗೆ ಕಾನೂನು ನೋಟಿಸ್ ನೀಡಿದ್ದಾರೆ.
ಊರಿಗೆ ತೆರಳಲು ಅವಕಾಶ ನೀಡುವಂತೆ ಆಗ್ರಹಿಸಿ ಸುಮಾರು 300 ರಷ್ಟು ವಲಸೆ ಕಾರ್ಮಿಕರು ಐಐಎಂಎ ಕ್ಯಾಂಪಸ್ ಬಳಿಯ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ವಿರುದ್ಧ ಕಲ್ಲು ತೂರಾಟ ನಡೆಸಿದ ಒಂದು ದಿನದ ಬಳಿಕ ನಿರ್ದೇಶಕ ಪ್ರೊ. ಎರ್ರೋಲ್ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕರ ಪರ ವಕೀಲ ಆನಂದ್ ಯಾಗ್ನಿಕ್, ಕಾರ್ಮಿಕರ ವೇತನದ ವಿಷಯದಲ್ಲಿ ಸ್ಪಷ್ಟನೆ ಕೋರಿ ಮತ್ತು ಅವರನ್ನು ಮನೆಗೆ ಹೋಗದಂತೆ ತಡೆದಿದ್ದಕ್ಕಾಗಿ 1979 ರ ಅಂತರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಡಿ ಐಐಎಂ-ಎ ನಿರ್ದೇಶಕರಿಗೆ ಕಾನೂನು ನೋಟಿಸ್ ನೀಡಲಾಗಿದೆ. ಇಲ್ಲಿ ಈ ಸಮಸ್ಯೆ ಇತ್ಯರ್ಥವಾಗದಿದ್ದರೆ ನಾವು ಹೈಕೋರ್ಟ್ಗೆ ಹೋಗುತ್ತೇವೆ ಎಂದಿದ್ದಾರೆ. ಅಲ್ಲದೆ, ಕಲ್ಲು ತೂರಾಟದ ಬಳಿಕ ಬಂಧನಕ್ಕೊಳಗಾದ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ 35 ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು, ಇಲ್ಲಿಯವರೆಗಿನ ಬಾಕಿಯಿರುವ ವೇತನ ಪಾವತಿಸಬೇಕು. ಅವರು ಊರಿಗೆ ಮರಳುವ ಬಗ್ಗೆ ಖಚಿತಪಡಿಸ, ಉಚಿತವಾಗಿ ಮರಳುವ ವ್ಯವಸ್ಥೆಯನ್ನು ಮಾಡಬೇಕು ಎಂದು ಐಐಎಂ-ಎ ನಿರ್ದೇಶಕ ಮತ್ತು ಗುತ್ತಿಗೆದಾರರನ್ನು ಒತ್ತಾಯಿಸಿದ್ದಾರೆ.