ರಂಗಾರೆಡ್ಡಿ (ತೆಲಂಗಾಣ): ಉನ್ನತ ಹುದ್ದೆಯಲ್ಲಿದ್ದ ಅವರಿಬ್ಬರೂ ಕಳೆದ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮಕ್ಕಳಾಗಿಲ್ಲವೆಂಬ ಕೊರಗು ಇಬ್ಬರನ್ನೂ ಕಾಡುತ್ತಿತ್ತು. ಇದರಿಂದ ಕೋಪಗೊಂಡ ಪತಿ, ಹೆಂಡ್ತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರ:
ಖಾಸಗಿ ಏರ್ವೇಸ್ನಲ್ಲಿ ಪೈಲಟ್ ಆಗಿ ವೆಂಕಟೇಶ್ವರ್ ರಾವ್ ಕೆಲಸ ಮಾಡುತ್ತಿದ್ದಾರೆ. ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಪತ್ನಿ ಲಾವಣ್ಯ ಕೆಲಸ ಮಾಡುತ್ತಿದ್ದರು. ಇಬ್ಬರೂ ವಿವಾಹವಾಗಿ 8 ವರ್ಷ ಕಳೆದರೂ ಮಕ್ಕಳಾಗಿಲ್ಲ. ಈ ಕೊರಗಿನಿಂದ ಬೇಸರಗೊಂಡ ವೆಂಕಟೇಶ್ವರ್ ಲಾವಣ್ಯಗೆ ಹಿಂಸಿಸುತ್ತಿದ್ದನಂತೆ. ಇದು ಮಿತಿಮೀರಿ ಪತ್ನಿ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ.
‘ಅಪ್ಪ..ಅಮ್ಮಾ.. ಇನ್ನು ನಾನು ಬದುಕುವುದಿಲ್ಲ. ನನ್ನನ್ನು ಕ್ಷಮಿಸಿ. ನೀವು ನನ್ನನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದೀರಿ. ನಿಮ್ಮಿಂದ ದೂರವಾಗುತ್ತಿದ್ದೇನೆ. ನನ್ನ ಗಂಡನ ಜೊತೆ ನಾನು ಜೀವಿಸುವುದಿಲ್ಲ’ ಎಂದು ಫೇಸ್ಬುಕ್ ಮೂಲಕ ತಿಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಂಡ ವೆಂಕಟೇಶ್ವರ್ ಮತ್ತು ಆತನ ತಂದೆ, ತಾಯಿ ಚಿತ್ರಹಿಂಸೆ ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಲಾವಣ್ಯ ಸಹೋದರ ಆರೋಪಿಸಿದ್ದಾರೆ. ನನ್ನ ಅಳಿಯ ವೆಂಕಟೇಶ್ವರ್ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಥಳಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಲಾವಣ್ಯರ ತಂದೆ-ತಾಯಿ ಆರೋಪಿಸಿದ್ದಾರೆ.
ಲಾವಣ್ಯಳಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಮೂಲಕ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ವೆಂಕಟೇಶ್ವರ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.