ಜಬುವಾ(ಮಧ್ಯಪ್ರದೇಶ): ಗಂಡನೊಂದಿಗೆ ಜಗಳ ಮಾಡಿದ ಹೆಂಡತಿಗೆ ಗ್ರಾಮದ ಸದಸ್ಯರು ಸೇರಿ ಅತ್ಯಂತ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಜಬುವಾದಲ್ಲಿ ನಡೆದಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಜಬುವಾ ಬುಡಕಟ್ಟು ಜನಾಂಗದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ.
ಯಾಕೀ ಶಿಕ್ಷೆ? ಘಟನೆಯ ವಿವರ:
ಮಹಿಳೆ ಮತ್ತು ಆಕೆಯ ಗಂಡನ ನಡುವೆ ಜಗಳ ನಡೆದಿದೆ. ಈ ವಿಚಾರ ಗ್ರಾಮದ ಹಿರಿಯರವರೆಗೂ ಹೋಗಿದೆ. ಇಬ್ಬರನ್ನೂ ಒಂದೆಡೆ ಸೇರಿಸಿ ಇಬ್ಬರ ವಾದ-ಪ್ರತಿವಾದ ಆಲಿಸಿರುವ ಗ್ರಾಮಸ್ಥರು ಪತ್ನಿಯೇ ತಪ್ಪಿತಸ್ಥಳೆಂದು ನಿರ್ಧರಿಸಿದ್ದಾರೆ. ಬಳಿಕ ಗಂಡನನ್ನು ಹೊತ್ತು ಸಾಗುವ ಅಮಾನವೀಯ ಶಿಕ್ಷೆ ನೀಡಿದ್ದಾರೆ. ಭುಜದ ಮೇಲೆ ಗಂಡನನ್ನು ಹೊತ್ತುಕೊಂಡು ಇಡೀ ಗ್ರಾಮವನ್ನು ಪ್ರದಕ್ಷಿಣೆ ಹಾಕುವಂತೆ ತಿಳಿಸಿದ್ದಾರೆ. ಅದರಂತೆ ಅಸಹಾಯಕಳಾದ ಮಹಿಳೆ ತನ್ನಿಂದ ಸಾಧ್ಯವಾಗದಿದ್ರೂ ಕಷ್ಟಪಟ್ಟು ಗಂಡನನ್ನು ಹೆಗಲ ಮೇಲೆ ಕೂರಿಸಿಕೊಂಡು ಸಾಗಿದ್ದಾಳೆ.
ಗಂಡನನ್ನು ಹೊತ್ತುಕೊಂಡು ಮಹಿಳೆ ಗ್ರಾಮದ ರಸ್ತೆಗಳಲ್ಲಿ ಸಾಗುತ್ತಿದ್ದಂತೆ ಆಕೆಯ ಹಿಂಭಾಗದಿಂದ ಬರುತ್ತಿದ್ದ ಪುರುಷರು ಕೈಯಲ್ಲಿ ದೊಣ್ಣೆ, ಬಡಿಗೆಗಳನ್ನು ಹಿಡಿದು ಥಳಿಸಿದ್ದಲ್ಲದೆ, ಮನಬಂದಂತೆ ನಿಂದಿಸುತ್ತಿದ್ದರು.
ಈ ಕ್ರೂರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ಥ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡಿರುವ ಪೊಲೀಸರು ಹೇಳಿಕೆ ದಾಖಲಿಸಿದ್ದು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.