ಭುವನೇಶ್ವರ (ಒಡಿಶಾ) : ಆಯುಷ್ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಮಹಿಳಾ ಉದ್ಯೋಗಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನ ಪರಿಶೀಲನೆಯ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎಸ್. ಸಾರಂಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ನೌಕರಳಾಗಿರುವ ಮಹಿಳೆ, ತನ್ನ ಆರೋಪವನ್ನು ಸಮರ್ಥಿಸಲು ಸಾಕ್ಷ್ಯಗಳನ್ನು ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರಿ ಪದೇ ಪದೆ ನನಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ತನ್ನೊಂದಿಗೆ ಸಂಬಂಧ ಹೊಂದಲು ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾಳೆ.
ನಾನು ದೂರು ನೀಡಿದ ನಂತರ ಅವರು ಅಶ್ಲೀಲ ಸಂದೇಶ ಮತ್ತು ವಿಡಿಯೋ ಕಳುಹಿಸುವುದನ್ನು ನಿಲ್ಲಿಸಿದ್ದರು. ಇತ್ತೀಚೆಗೆ, ಮತ್ತೆ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ನಾವು ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಕಿರುಕುಳದ ಪ್ರಕರಣಗಳನ್ನು ಪರಿಹರಿಸಲು ವಿಶೇಷ ವಿಭಾಗ ಇಲ್ಲದ ಕಾರಣ ಪೊಲೀಸ್ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.