ನವದೆಹಲಿ : ಆಗಸ್ಟ್ 1 ರೊಳಗೆ 35 ಲೋಧಿ ಎಸ್ಟೇಟ್ನಲ್ಲಿರುವ ಸರ್ಕಾರಿ ವಸತಿಯನ್ನು ಖಾಲಿ ಮಾಡುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು , ಮನೆ ಖಾಲಿ ಮಾಡುವ ಕುರಿತು ನಾನು ಸರ್ಕಾರಕ್ಕೆ ಯಾವುದೇ ಮನವಿ ಮಾಡಿಲ್ಲ. ಜುಲೈ 1 ರಂದು ನೋಟಿಸ್ ನೀಡಿದಂತೆ ಆಗಸ್ಟ್ 1 ರಂದು 35 ಲೋಧಿ ಎಸ್ಟೇಟ್ನಲ್ಲಿರುವ ಮನೆಯನ್ನು ಖಾಲಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಗಾಂಧಿ ಕುಟುಂಬಕ್ಕೆ ನೀಡಿದ್ದ ವಿಶೇಷ ಭದ್ರತೆಯನ್ನು ಸರ್ಕಾರ ಹಿಂಪಡೆದಿರುವ ಹಿನ್ನೆಲೆ ಪ್ರಿಯಾಂಕಾ ಗಾಂಧಿ ವಾದ್ರಾ ಆಗಸ್ಟ್ 1 ರೊಳಗೆ ದೆಹಲಿಯಲ್ಲಿರುವ ತಮ್ಮ ಸರ್ಕಾರಿ ವಸತಿ ಖಾಲಿ ಮಾಡುವಂತೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಎಸ್ಟೇಟ್ ನಿರ್ದೇಶನಾಲಯವು ನೋಟಿಸ್ ನೀಡಿತ್ತು.
ಎಸ್‌ಪಿಜಿ ಹಿಂಪಡೆದು ಝಡ್ ಪ್ಲಸ್ ಭದ್ರತೆ ನೀಡಿದ ಬಳಿಕ ಭದ್ರತೆ ಆಧಾರದಲ್ಲಿ ನಿಮಗೆ ಮನೆ ಹಂಚಿಕೆ ಮಾಡಬೇಕು. ಆದ್ದರಿಂದ 35 ಲೋಧಿ ಎಸ್ಟೇಟ್ನಲ್ಲಿರುವ ಟೈಪ್ 6 ಬಿ ಮನೆಯನ್ನು ಜುಲೈ 1 ರಿಂದ ನಿಮ್ಮಿಂದ ಹಿಂಪಡೆಯಲಾಗಿದೆ. ಆಗಸ್ಟ್ 1 ರೊಳಗೆ ಮನೆ ತೊರೆಯುವಂತೆ ಸಚಿವಾಲಯ ಪ್ರಿಯಾಂಕ ಗಾಂಧಿಗೆ ತಿಳಿಸಿತ್ತು. ಹಾಗಾಗಿ ಆಗಸ್ಟ್ 1 ರೊಳಗೆ ಮನೆ ಖಾಲಿ ಮಾಡುವುದಾಗಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.