ಚಂಡೀಗಢ: ದುಷ್ಟ ಪತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳಿಗೆ ಬೆಂಕಿ ಹಚ್ಚಿ ಇಬ್ಬರನ್ನು ಕೊಲೆಗೈದಿರುವ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ನಡೆದ ಈ ಘಟನೆಯಲ್ಲಿ ಎರಡು ವರ್ಷ ವಯಸ್ಸಿನ ಕಿರಿಯ ಮಗಳಿಗೆ ಸುಟ್ಟ ಗಾಯಗಳಾಗಿದ್ದವು. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ದಾಖಲಾದ ದೂರಿನ ಆಧಾರದ ಮೇಲೆ ರಾಜೇಶ್ ಎಂದು ಗುರುತಿಸಲ್ಪಟ್ಟ, 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನನ್ನು ಕೊಲೆ ಮತ್ತು ಇತರ ಆರೋಪಗಳ ಮೇಲೆ ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಾಗ ತಕ್ಷಣ ಅವರು ಮನೆಗೆ ಹೋಗಿದ್ದಾರೆ. ಆಗ ಮಂಜು ಮತ್ತು ಆಕೆಯ ಮಗಳ ಸುಟ್ಟ ದೇಹಗಳು ಮಂಚದ ಮೇಲೆ ಇದ್ದವು. ಇನ್ನೊಬ್ಬ ಮಗಳಿಗೆ ಸುಟ್ಟ ಗಾಯಗಳಾಗಿದ್ದು, ಕೋಣೆಯ ಹೊರಗೆ ಇದ್ದಳು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಕಾರ್ಮಿಕನಾದ ರಾಜೇಶ್ ಘಟನೆಯ ನಂತರ ಪರಾರಿಯಾಗಿದ್ದ, ಬಳಿಕ ಅವನನ್ನು ಮಂಗಳವಾರ ರೋಹ್ಟಕ್ನಲ್ಲಿ ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ. ಬಂಧಿಸುವಾಗ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಹಾಗಾಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣವೂ ಆತನ ಮೇಲಿದೆ.
ಮದುವೆಯಾದಾಗಿನಿಂದ ರಾಜೇಶ್ ಮಂಜುಗೆ ಕಿರುಕುಳ ನೀಡುತ್ತಿದ್ದ, ಅವರು ಮದುವೆಯಾಗಿ ಏಳು ವರ್ಷಗಳು ಕಳೆದಿವೆ ಎಂದು ಯುವತಿ ತಂದೆ ಮಹೇಂದ್ರ ಅವರು ದೂರಿನಲ್ಲಿ ಆರೋಪಿಸಿದ್ದಾರೆ.