ಭಾರತ ತನ್ನ ವಿಶಾಲವಾದ ಗಡಿಭಾಗಗಳನ್ನು ರಕ್ಷಿಸಿಕೊಳ್ಳಬೇಕಾದರೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ಹೊಂದುವುದು ಅನಿವಾರ್ಯವಾಗಿದೆ. ಸದ್ಯ ಭಾರತದ ಸೇನಾ ಬತ್ತಳಿಕೆಯು ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರಗಳಿಗೂ ಸವಾಲು ಒಡ್ಡುವಷ್ಟು ಸಮರ್ಥವಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಭಾರತ - ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತಕ್ಕೆ ದೂರವ್ಯಾಪ್ತಿಯ S-400 ಮಾದರಿಯ ಕ್ಷಿಪಣಿಗಳು ತುರ್ತಾಗಿ ಬೇಕಿವೆ. ಭಾರತ ಚೀನಾದೊಂದಿಗೆ ಹಂಚಿಕೊಂಡಿರುವ 4000 ಕಿಮೀ ಉದ್ದದ ಗಡಿಯ ರಕ್ಷಣೆಗೆ S-400 ಕ್ಷಿಪಣಿಗಳು ಅಗತ್ಯವಾಗಿವೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
S-400 ಕ್ಷಿಪಣಿಯ ಪೂರ್ಣ ಹೆಸರು S-400 Triumph ಆಗಿದ್ದು, ನ್ಯಾಟೊ ದೇಶಗಳಲ್ಲಿ ಇವನ್ನು SA-21 Growler ಎಂದು ಕರೆಯುತ್ತಾರೆ. S-400 ಕ್ಷಿಪಣಿಗಳು ರಷ್ಯಾದ ಅತ್ಯಾಧುನಿಕ ದೂರವ್ಯಾಪ್ತಿಯ ಮಿಸೈಲ್ ವ್ಯವಸ್ಥೆಯಾಗಿದೆ. ಈ ಕ್ಷಿಪಣಿಗಳ ಖರೀದಿಗಾಗಿ ಭಾರತ ಈಗಾಗಲೇ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಕ್ಷಿಪಣಿಗಳನ್ನು ರಷ್ಯಾ 2007 ರಲ್ಲಿ ಪ್ರಥಮ ಬಾರಿಗೆ ಮಾಸ್ಕೊ ನಗರದ ರಕ್ಷಣೆಗಾಗಿ ಪ್ರಯೋಗಿಸಿತ್ತು. ಒಂದೇ ಕ್ಷಿಪಣಿ ವ್ಯವಸ್ಥೆಯಲ್ಲಿ ಹಲವಾರು ಕ್ಷಿಪಣಿಗಳನ್ನು ಏಕಕಾಲಕ್ಕೆ ಹಾರಿ ಬಿಡಬಹುದಾದ ಅತ್ಯಾಧುನಿಕ ತಾಂತ್ರಿಕತೆ ಇದಾಗಿದೆ. ಅಲ್ಲದೆ ಶತ್ರುಗಳ ಮೇಲೆ ಇವುಗಳ ಪರಿಣಾಮ ಅನಾಹುತಕಾರಿಯಾಗಿರುತ್ತದೆ.
ಚೀನಾ ಪ್ರಥಮ ಬಾರಿಗೆ 2014 ರಲ್ಲಿ ರಷ್ಯಾದಿಂದ ಈ ಕ್ಷಿಪಣಿಗಳನ್ನು ಖರೀದಿಸಿತ್ತು. ಆದರೆ ಎಷ್ಟು ಸಂಖ್ಯೆಯ S-400 ಕ್ಷಿಪಣಿಗಳನ್ನು ರಷ್ಯಾ ಚೀನಾಕ್ಕೆ ಪೂರೈಸಿದೆ ಎಂಬುದರ ಖಚಿತ ಮಾಹಿತಿ ಲಭ್ಯವಾಗಿಲ್ಲ.
S-400 ಕ್ಷಿಪಣಿ ವ್ಯವಸ್ಥೆಯು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯುವ ಕ್ಷಮತೆಯನ್ನು ಹೊಂದಿದ್ದು, ಶತ್ರು ದೇಶದಿಂದ ಒಳಬರುವ ಕ್ಷಿಪಣಿಗಳನ್ನು ಮೊದಲೇ ಗುರುತಿಸಿ ಅವನ್ನು ಆಕಾಶದಲ್ಲೇ ಧ್ವಂಸ ಮಾಡುವ ಶಕ್ತಿ ಇದಕ್ಕಿದೆ. ಕೇವಲ ಐದು ನಿಮಿಷಗಳಲ್ಲಿ ನಿಯೋಜಿಸಿ ಪ್ರಯೋಗಿಸಬಹುದಾದ S-400 ಕ್ಷಿಪಣಿ ವ್ಯವಸ್ಥೆ ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ತುರ್ತಾಗಿ ಬೇಕಾಗಿದೆ.
S-400 ಕ್ಷಿಪಣಿಯ ವೈಶಿಷ್ಟ್ಯಗಳು
- ಒಂದು ಬಾರಿಗೆ 36 ಗುರಿಗಳನ್ನು ಧ್ವಂಸ ಮಾಡಬಲ್ಲದು.
- ಆಕಾಶದಲ್ಲಿ 100 ರಿಂದ 300 ಗುರಿಗಳನ್ನು ಪತ್ತೆ ಮಾಡಬಲ್ಲದು.
- 600 ಕಿಮೀ ದೂರದದಿಂದ ಬರುವ ಪ್ರತಿದಾಳಿಗಳನ್ನು ಗುರುತಿಸಬಲ್ಲವು.
- 400 ಕಿಮೀ ದೂರದವರೆಗೆ ದಾಳಿ ನಡೆಸಬಲ್ಲವು.
- ಪಾಕಿಸ್ತಾನದ ರಮಾಜ್ ಕ್ಷಿಪಣಿಗಳನ್ನು ಸುಲಭವಾಗಿ ನಾಶ ಮಾಡಬಲ್ಲವು.
- ಅಮೆರಿಕದ ಆಧುನಿಕ F-35 ಕ್ಷಿಪಣಿಗಳನ್ನು ಸಹ ಇವು ಧ್ವಂಸ ಮಾಡಬಲ್ಲವು.