ನವದೆಹಲಿ: ಸಂದೇಶಗಳನ್ನು ರವಾನಿಸುವ ಫ್ಲಾಟ್‌ಫಾರ್ಮ್ ವ್ಯಾಟ್ಸ್ಯಾಪ್ 'ಹಂಚಿಕೊಳ್ಳುವ ಮುಂಚೆ ಪರಿಶೀಲಿಸಿ' (ಚೆಕ್ ಇಟ್ ಬಿಫೋರ್ ಯು ಷೇರ್ ಇಟ್) ಎಂಬ ಹೊಸ ಕ್ಯಾಂಪೇನ್ ಆರಂಭಿಸಿದೆ.
ಕೋವಿಡ್-19 ಸಂಬಂಧ ವಾಟ್ಸ್ಯಾಪ್ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯುವ ಸಲುವಾಗಿ ಈ ಶೈಕ್ಷಣಿಕ ಅಭಿಯಾನವನ್ನು ಆರಂಭಿಸಿರುವುದಾಗಿ ಹೇಳಿದೆ.
ಯಾವುದೇ ಸಂದೇಶಗಳನ್ನು ಮತ್ತೊಬ್ಬರಿಗೆ ಫಾರ್ವಡ್ ಮಾಡುವ ಮುನ್ನ ಸತ್ಯಾಂಶವನ್ನು ಎರಡೆರಡು ಬಾರಿ ಖಾತ್ರಿ ಮಾಡಿಕೊಳ್ಳಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂಬ ಅಭಿಯಾನ ಆರಂಭವಾಗಲಿದೆ. ಇದರಿಂದ ತಪ್ಪು ಸಂದೇಶ ಹರಡುವುದು ನಿಲ್ಲಲಿದೆ ಎಂದು ಫೇಸ್‌ಬುಕ್ ಅಂಗ ಸಂಸ್ಥೆಯಾಗಿರುವ ವಾಟ್ಸ್ಯಾಪ್ ತಿಳಿಸಿದೆ.
Mygov ಸಹಾಯವಾಣಿಯನ್ನು ತೆರೆಯಲಾಗಿದೆ. ಇತರೆ ವೆಬ್‌ಸೈಟ್‌ಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕು. ಆ ಮೂಲಕ ಬೇರೆ ಬೇರೆ ಮೂಲಗಳಿಂದ ಬಂದಿರುವ ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದು ಹೇಳಿದೆ.
'ಹಂಚಿಕೊಳ್ಳುವ ಮುಂಚೆ ಪರಿಶೀಲಿಸಿ' ಅಭಿಯಾನ ನಮ್ಮ ಜವಾಬ್ದಾರಿಯನ್ನು ಬಳಕೆದಾರರಿಗೆ ತಿಳಿಸಲು ನೆರವಾಗುತ್ತದೆ. ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ನೀತಿ ರೂಪಿಸುವ ವಾಟ್ಸ್ಯಾಪ್‌ನ ಭಾರತದ ಮುಖ್ಯಸ್ಥ ಶಿವನಾಥ್ ತುಕ್ರಾಲ್ ಹೇಳಿದ್ದಾರೆ.