ನವದೆಹಲಿ: ಜಾಗತಿಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಶೃಂಗಸಭೆಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೃತಕ ಬುದ್ದಿಮತ್ತೆಯಲ್ಲಿ ಭಾರತ ಜಾಗತಿಕ ಕೇಂದ್ರವಾಗಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.
RAISE 2020 ಶೃಂಗಸಭೆಯನ್ನ ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ನಮೋ, 2020 ರಾಷ್ಟ್ರೀಯ ಶಿಕ್ಷಣ ಯೋಜನೆ ತಂತ್ರಜ್ಞಾನದ ಮೂಲಕ ಕಲಿಯುವಿಕೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಆ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಭಾರತದಲ್ಲಿ ಸಾಮಾಜಿಕ ಪರಿವರ್ತನೆ, ಸಬಲೀಕರಣ ಕಾರ್ಯಕ್ಕೆ ಹೆಚ್ಚು ಉಪಯೋಗವಾಗಲಿದೆ ಎಂದರು.
ಕೃತಕ ಬುದ್ಧಿಮತ್ತೆ ಮಾನವ ಸಬಲೀಕರಣಕ್ಕೆ ಅದ್ಭುತ ಕೆಲಸ ಮಾಡಲಿದ್ದು, ಅದನ್ನು ಯಾವ ರೀತಿಯಾಗಿ ಬಳಸಿಕೊಳ್ಳಲಾಗುತ್ತದೆ ಎಂದುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಮಾಜದ ಅನುಕೂಲಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದು ಅತಿ ಅವಶ್ಯವಾಗಿದ್ದು ಎಂದು ನಮೋ ತಿಳಿಸಿದ್ದು, ದೇಶದ 11,000 ವಿದ್ಯಾರ್ಥಿಗಳು ಈಗಾಗಲೇ ಕೃತಕ ಬುದ್ದಿಮತ್ತೆ ಯೋಜನೆ ಅಡಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
RAISE 2020 ಶೃಂಗಸಭೆಯಲ್ಲಿ ತಜ್ಞರು, ಉದ್ಯಮಿಗಳು ಸೇರಿದಂತೆ ಅನೇಕರು ವಿಷಯ ಮಂಡನೆ ಮಾಡಲಿದ್ದು, ಇದರಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಐಬಿಎಣ ಸಿಇಒ ಅವರಿಂದ್ ಕೃಷ್ಣ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.