ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಅಪರಾಧಿಗಳಿಗೆ ಇಂದು ಬೆಳಗ್ಗೆ ಮರಣದಂಡನೆ ನಿಗದಿಯಾಗಿತ್ತು. ಆದರೆ, ಪವನ್ ಗುಪ್ತಾ ರಾಷ್ಟ್ರಪತಿಗೆ ಸಲ್ಲಿಸಿರುವ ಕ್ಷಮಾಪಣ ಅರ್ಜಿಯಿಂದಾಗಿ ಧರ್ಮೆಂದರ್ ರಾಣಾ ಒಳಗೊಂಡಿರುವ ನ್ಯಾಯಪೀಠ, ಮರಣ ದಂಡಣೆಯನ್ನು ಮುಂದೂಡಿದ್ದು, ಮುಂದಿನ ಆದೇಶದವರೆಗೆ ಕಾಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿರುವ ಮುಖೇಶ್ ಕುಮಾರ್ ಸಿಂಗ್ (32), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಮತ್ತು ಪವನ್ ಎಂಬ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾದ ಹಿನ್ನೆಲೆ, ನಾವು ಈಗಾಗಲೇ ನೇಣಿಗೇರಿಸುವ ಹಗ್ಗಗಳನ್ನು ಪರೀಶಿಲಿಸಿದ್ದು, ಮೀರತ್ನಿಂದ ಹ್ಯಾಂಗ್ಮ್ಯಾನ್ನನ್ನು ಕರೆಸಿ, ನಕಲಿ ಮರಣ ದಂಡನೆಯನ್ನು ನಡೆಸಿ ಪರಿಶೀಲನೆ ನಡೆಸಿದ್ದೇವೆ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪವನ್ ಗುಪ್ತಾ ಅರ್ಜಿ ಹೊರತುಪಡಿಸಿ ಇನ್ನಿತರರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ, ಈ ಮೊದಲು ಜನವರಿ 22ಕ್ಕೆ ಮರಣ ದಂಡನೆ ದಿನಾಂಕವನ್ನು ನಿಗದಿಪಡಿಸಿದ್ದು, ನಂತರ ಫೆಬ್ರವರಿ 1ಕ್ಕೆ ಮಂದೂಡಲ್ಪಟ್ಟಿತು. ನಂತರ ಫೆಬ್ರವರಿ 17 ರಂದು ನ್ಯಾಯಾಲಯವು ಮಾರ್ಚ್ 3 ರಂದು ಬೆಳಗ್ಗೆ 6 ಗಂಟೆಗೆ ಡೆತ್ ವಾರಂಟ್ ಜಾರಿಗೊಳಿಸಲು ಹೊಸ ದಿನಾಂಕವನ್ನು ನೀಡಿತ್ತು, ಆದರೆ ಪವನ್ ಗುಪ್ತಾನ ಕ್ಷಮಾಪಣ ಮನವಿ ಬಾಕಿ ಇರುವುದರಿಂದ ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಮರಣದಂಡನೆಯನ್ನು ಮುಂದೂಡಿದೆ.