ಭಿಡುಕಿ(ಹರಿಯಾಣ): ಆಕಾಶದಿಂದ ಮಳೆಯಾಗಿ ಧರೆಗಿಳಿಯುವ ಒಂದೊಂದು ಹನಿಯನ್ನೂ ಕೂಡಾ ಹರಿಯಾಣದ ಪಲ್ವಾಲ್ ಜಿಲ್ಲೆಯ ಭಿಡುಕಿ ಗ್ರಾಮ ಸಂರಕ್ಷಿಸುತ್ತದೆ. ಮಳೆಯಿಲ್ಲದೇ ಇರೋ ವೇಳೆ ಈ ಊರಿನಲ್ಲಿ ನೀರಿನ ಸಮಸ್ಯೆನೇ ಇರೋದಿಲ್ಲ.
ಮೊದಲಿಗೆ ಮಳೆ ಬಿದ್ದರೆ ಊರಿನಲ್ಲಿ ನೀರು ತುಂಬಿರುತ್ತಿತ್ತು. ರಸ್ತೆಗಳಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾಗುತ್ತಿತ್ತು. ಶಾಲೆಗಳಿಗೆ ಚರಂಡಿ ನೀರು ನುಗ್ಗಿ ಭಾರೀ ಸಮಸ್ಯೆ ಉಂಟಾಗುತ್ತಿತ್ತು. ಈ ವೇಳೆ ಈ ಗ್ರಾಮದ ಸರಪಂಚ್ ನೇತೃತ್ವದಲ್ಲಿ ಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. ಮೊದಲಿಗೆ ಶಾಲೆಯ ಛಾವಣಿಗೆ ಪೈಪ್ಗಳನ್ನು ಅಳವಡಿಸಿ ಬಿದ್ದ ಮಳೆ ನೀರನ್ನು ಒಂದೆಡೆ ಶೇಖರಿಸಿ, ಅಂತರ್ಜಲ ಮರುಪೂರಣಕ್ಕೆ ಬಳಕೆ ಮಾಡುತ್ತಿದ್ದರು.
ನೀರು ಶೇಖರಿಸೋಕೆ ಭೂಮಿಯಲ್ಲಿ ಮೂರು ಪ್ರತ್ಯೇಕ ಟ್ಯಾಂಕ್ಗಳನ್ನು ನಿರ್ಮಿಸಲಾಗಿತ್ತು. ಮೊದಲ ಎರಡು ಟ್ಯಾಂಕ್ಗಳು ಮಳೆ ನೀರಿನಲ್ಲಿನ ತ್ಯಾಜ್ಯವನ್ನು ಬೇರ್ಪಡಿಸಿದ್ರೆ, ಮೂರನೇ ಟ್ಯಾಂಕ್ನಲ್ಲಿ ದಿನಬಳಕೆಗೆ ಬೇಕಾಗುವ ಶುದ್ಧ ನೀರು ಶೇಖರಣೆಯಾಗ್ತಿತ್ತು. ಈ ನೀರನ್ನು ಸ್ವಲ್ಪ ಬಳಸಿಕೊಂಡರೆ ಮತ್ತೆ ಬಹುತೇಕ ನೀರು ಅಂತರ್ಜಲ ಮರುಪೂರಣಕ್ಕೆ ಬಳಕೆಯಾಗ್ತಿತ್ತು.
ಮಳೆ ನೀರು ಸಂಗ್ರಹ ಯೋಜನೆ ಯಶಸ್ವಿಯಾದ್ಮೇಲೆ ಗ್ರಾಮದ ಹಲವಾರು ಮನೆಗಳೂ ಕೂಡಾ ಇದೇ ಮಾರ್ಗ ಅನುಸರಿಸಿ, ಮಳೆ ನೀರಿನ ಅವಾಂತರ ಕಡಿಮೆ ಮಾಡಿವೆ. ನೀರು ತುಂಬಿ ಹೊರ ಹೋಗೋದನ್ನೂ ತಡೆದ ಸರಪಂಚ್ ಇದೇ ನೀರಿನಲ್ಲಿ ಸಣ್ಣ ಸಣ್ಣ ಹೊಂಡಗಳಿಗೆ, ಹೊಲ ತೋಟಗಳಿಗೆ ಹರಿಸೋಕೆ ಮುಂದಾದ್ರು. ಅಲ್ಲಿಯೂ ಸಣ್ಣ ಸಣ್ಣ ಟ್ಯಾಂಕ್ಗಳಲ್ಲಿ ನೀರು ಶೇಖರಣೆ ಮಾಡಿ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಲಾಯ್ತು. ಈಗ ದೊಡ್ಡದಾದ ಟ್ಯಾಂಕ್ ಅನ್ನು ನಿರ್ಮಾಣ ಮಾಡಲಾಗಿದ್ದು, ಮಾನ್ಸೂನ್ ನಂತರ ಕೃಷಿಗೆ ನೀರನ್ನು ಬಳಸಿಕೊಳ್ಳಲಾಗ್ತಿದೆ.
ಈ ಗ್ರಾಮದ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸರಪಂಚ್ ಸತ್ಯದೇವ್ ಗೌತಮ್ ಅವರನ್ನು ಮನಸಾರೆ ಹೊಗಳಿದ್ದು, ಬೇರೆ ಗ್ರಾಮಗಳಿಗೆ ಭಿಡುಕಿ ಗ್ರಾಮ ಆದರ್ಶ ಎಂದಿದ್ದಾರೆ. ಇದಕ್ಕೆ ಪಲ್ವಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಕುಮಾರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.