ನವದೆಹಲಿ: ಅತ್ಯಂತ ಶಕ್ತಿಶಾಲಿ ಲೋಕೊಮೋಟಿವ್ ರೈಲು ಇಂಜಿನ್ ಅನ್ನು ಭಾರತದಲ್ಲಿಯೇ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಭಾರತೀಯ ರೈಲ್ವೆಗೆ ಸೇರ್ಪಡೆಗೊಳ್ಳಲಿದೆ. 12,000 ಹೆಚ್ಪಿ ಸಾಮರ್ಥ್ಯದ ಇಂಜಿನ್ ಇದಾಗಿರಲಿದ್ದು, ಹರಿಯಾಣದ ಹಿಸಾರ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.
ಮೇಡ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ WAG12 ಹೆಸರಿನ ಲೋಕೊಮೋಟಿವ್ ಇಂಜಿನ್ ಭಾರತದ ಈವರೆಗಿನ ಶಕ್ತಿಶಾಲಿ ರೈಲ್ವೆ ಇಂಜಿನ್ ಎನಿಸಿಕೊಂಡಿದೆ. ಇದಲ್ಲದೆ ಸುಮಾರು 150 ರೈಲ್ವೆ ಬೋಗಿಗಳನ್ನು ಎಳೆಯುವ ಸಾಮರ್ಥ್ಯ ಈ ಇಂಜಿನ್ ಹೊಂದಿರಲಿದ್ದು, ಈಗಿರುವ ಸಾಮಾನ್ಯ ಇಂಜಿನ್ಗಳಿಗಿಂತ ಹೆಚ್ಚು ಬಲಶಾಲಿ ಹಾಗೂ ವೇಗ ಹೊಂದಿದೆ.
ಮೇಡ್ ಇನ್ ಇಂಡಿಯಾ ಯೋಜನೆಯಡಿ ಬಿಹಾರದ ಮೇಧಾಪುರ ಕೈಗಾರಿಕಾ ಘಟಕದಲ್ಲಿ ಇಂಜಿನ್ ನಿರ್ಮಿಸಲಾಗಿದ್ದು, 800ಕ್ಕೂ ಹೆಚ್ಚು ಲೋಕೊ ಇಂಜಿನ್ಗಳನ್ನು ಬೆಂಗಳೂರಿನ ಇಂಜಿನಿಯರಿಂಗ್ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಇನ್ನೂ ಈ ನೂತನ ಇಂಜಿನ್ ಚಾಲನೆಗಾಗಿ ಈಗಾಗಲೇ ಲೋಕೊ ಪೈಲೆಟ್ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ಇಂಜಿನ್ಗಳ ತಯಾರಿಕೆಯ ಕುರಿತ ತಂತ್ರಜ್ಞಾನದ ಮಾಹಿತಿಯನ್ನೂ ಅವರಿಗೆ ಕಲಿಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಹಿಸಾರ್ ರೈಲು ನಿಲ್ದಾಣದ ಅಧಿಕಾರಿ ಕೆ.ಎಲ್ ಚೌಧರಿ, WAG12 ಲೋಕೊ ಇಂಜಿನ್ 180 ಟನ್ನಷ್ಟು ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಅಲ್ಲದೆ ಗಂಟೆಗೆ 100ರಿಂದ 120 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ ಎಂದಿದ್ದಾರೆ.