ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ವಿಸ್ತಾರಾ ವಿಮಾನಯಾನ ಸಂಸ್ಥೆಯು, ಏಪ್ರಿಲ್ 15ರಿಂದ 30ರ ನಡುವೆ 3 ದಿನ ವೇತನ ರಹಿತ ರಜೆ ತೆಗೆದುಕೊಳ್ಳಬೇಕೆಂದು ತನ್ನ ಹಿರಿಯ ಉದ್ಯೋಗಿಗಳಿಗೆ ಹೇಳಿದೆ.
"ಲಾಕ್ ಡೌನ್ ವಿಸ್ತರಣೆಯಾಗಿರುವುದರಿಂದ ವಿಮಾನಯಾನ ಸೇವೆಯು ಮೇ 3ರವರೆಗೆ ಅಮಾನತುಗೊಂಡಿದೆ. ಇದು ನಮ್ಮ ಕ್ಯಾಶ್ ಫ್ಲೋ ಮೇಲೆ ಪರಿಣಾಮ ಬೀರುತ್ತಿದೆ. ಉದ್ಯೋಗಗಳನ್ನು ರಕ್ಷಿಸುವ ಸಲುವಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
"ಉದ್ಯೋಗದ ದರ್ಜೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಏಪ್ರಿಲ್ 15ರಿಂದ 30ರ ನಡುವಿನ ಅವಧಿಯಲ್ಲಿ, ವಿಸ್ತಾರಾದ ಸುಮಾರು 30 ಶೇಕಡಾದಷ್ಟು ಉದ್ಯೋಗಿಗಳು ಕಡ್ಡಾಯವಾಗಿ 3 ದಿನಗಳ ಕಾಲ ವೇತನರಹಿತ ರಜೆ ತೆಗೆದುಕೊಳ್ಳಬೇಕು. ಉಳಿದ 70 ಶೇಕಡಾ ಉದ್ಯೋಗಿಗಳಿಗೆ ಈ ನಿಯಮ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮಾರ್ಚ್ 27ರಂದು, ಅದೇ ಹಿರಿಯ ಉದ್ಯೋಗಿಗಳಿಗೆ ಏಪ್ರಿಲ್ 1ರಿಂದ ಏಪ್ರಿಲ್ 14ರ ನಡುವೆ ಮೂರು ದಿನಗಳವರೆಗೆ ವೇತನ ರಹಿತ ರಜೆ ತೆಗೆದುಕೊಳ್ಳುವಂತೆ ವಿಸ್ತಾರಾ ಸೂಚಿಸಿತ್ತು.
ಕಂಪೆನಿಯ 4,000 ಉದ್ಯೋಗಿಗಳಲ್ಲಿ, ಸುಮಾರು 1,200 ಹಿರಿಯ ಉದ್ಯೋಗಿಗಳು ಈ ನಿಯಮದಡಿ ಬರುತ್ತಾರೆಂದು ಕಂಪೆನಿ ತಿಳಿಸಿದೆ.