ಬಾಗಪತ್ (ಉತ್ತರಪ್ರದೇಶ) : ಹಥ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಉತ್ತರಪ್ರದೇಶ ಸರ್ಕಾರ ಕಠಿಣ ಶಿಕ್ಷೆ ಘೋಷಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಗ್ರಾಮದ ಮುಖ್ಯಸ್ಥೆಯೊಬ್ಬರು ಹೇಳಿದ್ದಾರೆ.
ಹಥ್ರಾಸ್ ಪ್ರಕರಣವನ್ನು ಖಂಡಿಸಿರುವ ಯುಪಿಯ ಬಾಗಪತ್ ಜಿಲ್ಲೆಯ ನಿರ್ಪುಡ ಗ್ರಾಮದ ಮುಖ್ಯಸ್ಥೆ ಮುನೇಶ್ ದೇವಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಗೆ ಪತ್ರ ಬರೆದಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಮುನೇಶ್ ದೇವಿ, ಇಂತಹ ಪ್ರಕರಣ ನಮ್ಮ ದೇಶದಲ್ಲಿನ ಹೆಣ್ಣುಮಕ್ಕಳಿಗಿರುವ ಅಭದ್ರತೆ ಸೂಚಿಸುತ್ತವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ಯುಪಿಯ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ ಅಂತ್ಯಕ್ರಿಯೆ ಮಾಡಲಾಗಿತ್ತು.