ರೂರ್ಕಿ(ಉತ್ತರಾಖಂಡ): ಸ್ಕಾರ್ಪಿಯೋ ಕಾರು ಅಪಘಾತಕ್ಕೀಡಾದ ಪರಿಣಾಮ ನಾಲ್ವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿ-ಹರಿದ್ವಾರ ಹೆದ್ದಾರಿಯ ಮಂಗಳೂರ ಸಮೀಪ ಗುರುವಾರ ರಾತ್ರಿ ಸಂಭವಿಸಿತು.
ಮದುವೆ ಮೆರವಣಿಗೆ ಸಂಭ್ರಮದಲ್ಲಿ ಮೀರತ್ನಿಂದ ರೂರ್ಕಿಗೆ ತೆರಳುತ್ತಿದ್ದಾಗ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೀರತ್ನಿಂದ ರೂರ್ಕಿಗೆ ಮದುವೆ ಮೆರವಣಿಗೆ ಸಾಗುತ್ತಿತ್ತು. ಬೇರೆ ಬೇರೆ ವಾಹನಗಳಲ್ಲಿ ಅತಿಥಿಗಳು ಹೋಗುತ್ತಿದ್ದಾಗ ಅತಿ ವೇಗದಲ್ಲಿದ್ದ ಸ್ಕಾರ್ಪಿಯೋ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸ್ಥಳೀಯರು ಆಗಮಿಸಿ, ತರ್ತು ಸೇವೆಗೆ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಒಟ್ಟು 8 ಜನರಿದ್ದರು. ಅಪಘಾತ ಸ್ಥಳದಲ್ಲೇ ಇಬ್ಬರು ಮೃತಪಟ್ಟರು. ಗಾಯಗೊಂಡ 6 ಜನರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮತ್ತೆ ಇಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನರಾದರು. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಮೀರತ್ನ ಸುಜಲ್, ಸೋನು ಮತ್ತು ದೌರಾಲಾದ ವಂಶ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಮೃತನ ಹೆಸರು ತಿಳಿದು ಬಂದಿಲ್ಲ. ಮೃತರೆಲ್ಲರೂ ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೂರ್ಕಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಗ್ರಾಮೀಣ ಎಸ್ಪಿ ಸ್ವಪನ್ ಕಿಶೋರ್ ಸಿಂಗ್ ಅಪಘಾತ ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಕ್ರೇನ್ ಮೂಲಕ ನಜ್ಜುಗುಜ್ಜಾದ ಕಾರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಏಕಾಏಕಿ ಜನರ ಮೇಲೆ ವ್ಯಕ್ತಿಯಿಂದ ಮಾರಣಾಂತಿಕ ದಾಳಿ: ಮೂವರು ಸಾವು, ಆರು ಮಂದಿಗೆ ಗಾಯ