ವಾರಣಾಸಿ: ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಶ್ರವಣ ಕುಮಾರನ ಕಥೆಯನ್ನು ನೀವೆಲ್ಲ ಕೇಳೇ ಇರ್ತಿರಾ. ಅದೇ ಮಾದರಿಯ ಬಾಲಕನ ಕಥೆಯವೊಂದು ವಾರಣಾಸಿಯಲ್ಲಿ ನಡೆದಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.
ಎಲ್ಲೆಡೆ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಜನರು ತಮ್ಮ ತಮ್ಮ ಗ್ರಾಮಗಳಿಗೆ ಕಾಲ್ನಡಿಗೆ ಮೂಲಕ ತೆರಳುತ್ತಿರುವ ದೃಶ್ಯಗಳನ್ನು ನಾವು ನೋಡುತ್ತಿದ್ದೇವೆ. ಆದರೆ, ಇಲ್ಲೊಬ್ಬ ಹನ್ನೊಂದು ವರ್ಷದ ತಾವೇರ್ ಆಲಂ ಎಂಬ ಬಾಲಕನೊಬ್ಬ ತನ್ನ ತಂದೆ - ತಾಯಿಯನ್ನು ಮೂರು ಚಕ್ರದ ಸೈಕಲ್ನಲ್ಲಿ ಕೂರಿಸಿಕೊಂಡು ತನ್ನೂರಿನತ್ತ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬನಾರಸ್ನಲ್ಲಿ ನೆಲಸಿದ್ದ ಕಾರ್ಮಿಕನ ಕುಟುಂಬವೊಂದು ಲಾಕ್ಡೌನ್ನಿಂದ ಕೆಲಸ ಇಲ್ಲದ ಕಾರಣ ತಮ್ಮ ಸ್ವಂತ ಗ್ರಾಮಕ್ಕೆ ತೆರಳಲು ನಿರ್ಧರಿಸಿ ತಮ್ಮ ಬಳಿ ಇರುವ ಮೂರು ಚಕ್ರದ ಸೈಕಲ್ನಲ್ಲಿ ಊರಿಗೆ ಹೊರಟ್ಟಿತ್ತು. ಕಾರ್ಮಿಕನಿಗೆ ಸುಮಾರು 50 ವರ್ಷ ವಯಸ್ಸಾಗಿದ್ದು, ತಂದೆಯ ಅಸಹಾಯಕತೆ ಅರಿತ ಈ ಬಾಲಕ, ತಂದೆಯ ಸಹಾಯಕ್ಕೆ ಮುಂದಾಗಿದ್ದ. ತಂದೆ ಕುಳಿತುಕೊಳ್ಳುವ ಸೈಕಲ್ನ ಟ್ರ್ಯಾಲಿಯಲ್ಲಿ ತಾನೇ ಕುಳಿತು ಸೈಕಲ್ ಚಲಾಯಿಸುವ ಮೂಲಕ ಸಾವಿರಾರು ಕಿ.ಮೀ ಗಟ್ಟಲೇ ಸಾಗಿ, ತಂದೆ ತಾಯಿಯ ಸೇವೆ ಮಾಡಿದ್ದಾನೆ.
ತಂದೆ - ತಾಯಿಯನ್ನು ಸೈಕಲ್ನಲ್ಲಿ ಕೂರಿಸಿಕೊಂಡು ಸಾಗುತ್ತಿದ್ದ ಪೋರನನ್ನು ಕಂಡ ಸಹ ಪ್ರಯಾಣಿಕರೊಬ್ಬರು, ಬಾಲಕ ಧೈರ್ಯ ಕಂಡು ಆಶ್ಚರ್ಯಗೊಂಡಿದ್ದರು. ಬಳಿಕ ಕಾರಿನಿಂದ ಇಳಿದು ಬಾಲಕನ ಮಾತನಾಡಿಸಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಬಳಿಕ ಬಾಲಕನ ಕುರಿತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಬಾಲಕನ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.