ನವದೆಹಲಿ: ಉತ್ತರಪ್ರದೇಶದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ದೊಡ್ಡ ರಾಜ್ಯಗಳಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ಟಾಟಾ ಟ್ರಸ್ಟ್‌ಗಳ ಪ್ರಥಮ ವರದಿಯಿಂದ ತಿಳಿದು ಬಂದಿದೆ.
ಈ ಪಟ್ಟಿಯಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ (ತಲಾ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು). ನಂತರದ ಸ್ಥಾನದಲ್ಲಿ ಕೇರಳ, ತಮಿಳುನಾಡು, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿವೆ.
ನ್ಯಾಯದಾನದೊಳಗೆ ಹೆಚ್ಚಿನವರಿಗೆ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ ಎಂಬ ಕಠೋರ ಚಿತ್ರಣದ ದತ್ತಾಂಶವನ್ನು ಈ ಅಧ್ಯಯನ ತೆರದಿಟ್ಟಿದೆ. ಕಡಿಮೆ ಆದಾಯ, ಮಾನವಶಕ್ತಿ ಮತ್ತು ಮೂಲಸೌಕರ್ಯಗಳು ಸೇರಿದಂತೆ ಹಸಿವಿನಂತಹ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ ಎಂದು ಸಂಶೋಧನೆ ಎತ್ತಿ ತೋರಿಸುತ್ತವೆ.
ಯಾವುದೇ ರಾಜ್ಯವು ವರದಿ ನಿಗದಿಪಡಿಸಿದ ಮಾನದಂಡಗಳನ್ನು ಸಂಪೂರ್ಣವಾಗಿ ತಲುಪುವಲ್ಲಿ ವಿಫಲವಾಗಿವೆ. ಲಿಂಗ ಸಮಾನತೆ ಮತ್ತು ವೈವಿಧ್ಯತೆಯ ಗುರಿಗಳು ನಿಧಾನವಾಗಿ ಸುಧಾರಿಸುತ್ತಿವೆ. ದಶಕಗಳಿಂದ ಆಳವಾಗಿ ಹುದುಗಿರುವ ವ್ಯವಸ್ಥಿತ ವೈಫಲ್ಯಗಳನ್ನು ಗುಣಪಡಿಸಲು ತಾತ್ಕಾಲಿಕ ಪರಿಹಾರಗಳನ್ನು ಸರ್ಕಾರಗಳು ಕಂಡುಕೊಂಡಿವೆ ಎಂದಿದೆ.
ಯಾವುದೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲ್ಲ ವಿಧದ ಕೋಟಾಗಳ (ಎಸ್‌ಟಿ, ಎಸ್‌ಸಿ ಮತ್ತು ಒಬಿಸಿ) ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಆದರೆ, ಕರ್ನಾಟಕವು ಇದರ ಹತ್ತಿರದಲ್ಲಿದೆ. ಎಸ್‌ಟಿ ಮತ್ತು ಒಬಿಸಿ ಮೀಸಲಾತಿಗಳನ್ನು ಪೂರೈಸಿದೆ. ಆದರೆ, ಎಸ್‌ಸಿ ಮೀಸಲಾತಿ ಗುರಿ ತಲುಪುವಲ್ಲಿ ಶೇ 4ರಷ್ಟು ಕಳೆದುಕೊಂಡಿದೆ ಎಂದು ತಿಳಿಸಿದೆ.