ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುವುದರೊಟ್ಟಿಗೆ ಹೊಸ ವರ್ಷ ಆರಂಭವಾಗಿದೆ. ಒಬಾಮಾ ಆಡಳಿತ ಸಹಿ ಹಾಕಿದ ಪರಮಾಣು ಒಪ್ಪಂದ ರದ್ದುಗೊಳಿಸುವುದಾಗಿ 2018ರ ಮೇ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ದಿನದಿಂದ ಎರಡೂ ದೇಶಗಳ ನಡುವೆ ಮನೆ ಮಾಡಿದ್ದ ಸಂಘರ್ಷ ಈಗ ಪೂರ್ಣ ಪ್ರಮಾಣದ ಯುದ್ಧಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಅದಾಗಲೇ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತೆ ಈ ಉದ್ವಿಗ್ನತೆ ಇನ್ನಷ್ಟು ವಿಕೋಪಕ್ಕೆ ಹೋಗಲು ಕಾರಣವಾದ ಘಟನೆ ಎಂದರೆ ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಆರ್ಜಿಸಿ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಮತ್ತು ಪಾಪುಲರ್ ಮೊಬಿಲೈಸೇಶನ್ ಫೋರ್ಸ್ನ ಕಮಾಂಡರ್ ಅಬು ಮುಹಾದಿ ಅಲ್ ಮುಹಂದೀಸ್ ಅವರ ಸಾವು. ಇರಾನಿ ಪಡೆಗಳು ತಮ್ಮ ಇಬ್ಬರು ಅತ್ಯಂತ ಸಮರ್ಥ ಸೇನಾ ನಾಯಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿವೆ. ಮತ್ತೊಂದೆಡೆ, ಇರಾನ್ ವಿರುದ್ಧದ ಕ್ರಮ ಅದರ ವಿರುದ್ಧದ ಯುದ್ಧ ಮುಗಿಸುವುದಕ್ಕಾಗಿಯೇ ವಿನಾ ಅದರೊಂದಿಗೆ ಸಮರಕ್ಕೆ ಇಳಿಯುವುದಕ್ಕಾಗಿ ಅಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ.
ವಾಸ್ತವವಾಗಿ ಅಮೆರಿಕ ಜೊತೆಗೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿದ್ದ ಷಾ ರೇಜಾ ಪೆಹೆಲ್ವಿ ಸರ್ಕಾರವನ್ನು 1979ರಲ್ಲಿ ಕಿತ್ತೊಗೆದ ಇಸ್ಲಾಮಿಕ್ ಕ್ರಾಂತಿಯ ದಿನದಿಂದಲೂ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹಬೆಯಾಡುತ್ತಿದೆ. ಅಮೆರಿಕ ಆ ಕ್ಷಣವೇ ಇರಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಳೆದುಕೊಂಡಿತು . ಅಂದಿನಿಂದ ಇರಾನ್ ಬಗೆಗಿನ ಅಮೆರಿಕದ ಹಿತಾಸಕ್ತಿಗಳನ್ನು ಟೆಹ್ರಾನಿನ ಪಾಕಿಸ್ತಾನ ಯಭಾರ ಕಚೇರಿ ಮೂಲಕ ಕಾಪಾಡಲಾಗುತ್ತಿತ್ತು. ಹದಗೆಡುತ್ತಿದ್ದ ಸಂಬಂಧಗಳು ಇನ್ನಷ್ಟು ಅಧೋಗತಿಗೆ ಇಳಿದದ್ದು 1995 ರಲ್ಲಿ. ಆಗ ಅಮೆರಿಕ, ಶಿಯಾ ಪಂಗಡದ ಬಾಹುಳ್ಯ ಇರುವ ಇರಾನ್ ವಿರುದ್ಧ ವ್ಯಾಪಾರ ನಿರ್ಬಂಧ ಹೇರಿತು. ಸಂಬಂಧಗಳ ನಡುವೆ ಹುಳಿ ಹಿಂಡಲು ಬಹುಶಃ ಮತ್ತೊಂದು ಕಾರಣ ಕೂಡ ಇತ್ತು. ಅದೆಂದರೆ, ಅಮೆರಿಕದ ಆಪ್ತಮಿತ್ರನಾಗಿದ್ದ ಸೌದಿ ಅರೇಬಿಯಾ ಮುಂದಾಳತ್ವದ ಬಹುತೇಕ ಸುನ್ನಿ ಜಿಸಿಸಿ (ಸುನ್ನಿ ಜಾಗತಿಕ ಸಹಕಾರ ಸಮಿತಿ) ದೇಶಗಳಿಗೆ ತೈಲ ಸಮೃದ್ಧಿ ಹೊಂದಿರುವ ಇರಾನ್ ಮೇಲುಗೈ ಸಾಧಿಸುವುದು ಇಷ್ಟ ಇರಲಿಲ್ಲ. ಆಗ ಸೌದಿ ಅರೇಬಿಯಾದಿಂದ ಬೃಹತ್ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದ್ದ ಅಮೆರಿಕ ಮತ್ತು ಅಮೆರಿಕದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಸೌದಿ ಅರೇಬಿಯಾಗಳಿಗೆ ಇರಾನನ್ನು ಮೂಲೆಗುಂಪು ಮಾಡಲು ಯಹೂದಿ ವ್ಯಾಪಾರಿ ಲಾಬಿ ಇಂಬು ನೀಡಿತು. ಇದರ ನಡುವೆ, 2015 ರಲ್ಲಿ, ಬರಾಕ್ ಒಬಾಮಾ ಇರಾನ್ ಜೊತೆ ಪರಮಾಣು ಒಪ್ಪಂದ ಮಾಡಿಕೊಂಡರು. ಆಗಿನಿಂದ ಅಂತರರಾಷ್ಟ್ರೀಯ ಪರಮಾಣು ಇಂಧನ ಪ್ರಾಧಿಕಾರ (ಐ ಎ ಇ ಎ) ಕಾಲಕಾಲಕ್ಕೆ ನಡೆಸುವ ಕಟ್ಟುನಿಟ್ಟಾದ ತಪಾಸಣೆಯ ಮೂಸೆಯಲ್ಲಿ ಪರಮಾಣು ಇಂಧನ ಉತ್ಪಾದನೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಕ್ರಮೇಣ ಗಣನೀಯವಾಗಿ ಕಡಿಮೆ ಮಾಡುವ ಅನಿವಾರ್ಯತೆ ಇರಾನಿಗೆ ಎದುರಾಯಿತು. ಇರಾನ್ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷರು ಕೂಡ ಆಗಿಂದಾಗ್ಗೆ ಪ್ರಮಾಣೀಕರಿಸಬೇಕಾಗಿತ್ತು. ಒಂದು ವರ್ಷ ಕಾಲ ಪ್ರಮಾಣೀಕರಣ ಪ್ರಕ್ರಿಯೆ ನಡೆಸಿದ ಟ್ರಂಪ್, ಐರೋಪ್ಯ ಒಕ್ಕೂಟ, ಫ್ರಾನ್ಸ್, ರಷ್ಯಾ, ಚೀನಾ, ಬ್ರಿಟನ್ ಮತ್ತು ಜರ್ಮನಿಯ ತೀವ್ರ ಆಕ್ಷೇಪದ ನಡುವೆಯೂ, ತಾನು ಚುನಾವಣಾ ಪ್ರಚಾರದ ಸಮಯದಲ್ಲಿ ಘೋಷಿಸಿದ್ದಂತೆ ‘ವಿನಾಶಕಾರಿ’ ಮತ್ತು ‘ಸದಾ ಕೆಟ್ಟ ಒಪ್ಪಂದ’ ಆಗಿರುವ ಇದನ್ನು ಕೊನೆಗೊಳಿಸುವ ತೀರ್ಮಾನ ಕೈಗೊಂಡರು. ಒಪ್ಪಂದ ಕುರಿತ ತನ್ನ ಬದ್ಧತೆಯಿಂದ ಇರಾನ್ ರಹಸ್ಯವಾಗಿ ಹಿಂದೆ ಸರಿದಿದೆ ಎಂಬ ಇಸ್ರೇಲ್ ಪ್ರಧಾನಿ ನೆತನ್ಯಾಹು ಮಂಡಿಸಿದ್ದ ಪ್ರಸ್ತಾವನೆಯೊಂದನ್ನೇ ಆಧರಿಸಿ ಈ ನಿರ್ಧಾರ ಹೊರಬಿದ್ದಿತ್ತು. ಸಹಜವಾಗಿಯೇ ಇದರಿಂದ ಇರಾನ್ ಕೆರಳಿತು ಮತ್ತು ಪ್ರತಿರೋಧದ ಪ್ರತಿಕ್ರಿಯೆ ನೀಡಿತು. ಒಂದು ಕ್ರಿಯೆ ಮತ್ತೊಂದು ಕ್ರಿಯೆಗೆ ಕಾರಣವಾಗಿ ಈಗ ಇರಾನಿನಿಂದ ಇಡೀ ಪ್ರದೇಶವನ್ನು ರಕ್ಷಿಸುವ ಹೆಸರಿನಲ್ಲಿ 18,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ಕೊಲ್ಲಿಯಲ್ಲಿ ಬೀಡುಬಿಟ್ಟಿರುವುದನ್ನು ನಾವು ಕಾಣುತ್ತ ಇದ್ದೇವೆ.
ಒಂದು ವೇಳೆ ಯುದ್ಧಕ್ಕೆ ಮುನ್ನುಡಿ ಬರೆಯುವಷ್ಟು ತೀವ್ರಗೊಂಡ ಕೊಲ್ಲಿಯ ಉದ್ವಿಗ್ನ ಸ್ಥಿತಿ ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಅಥವಾ ಬೀರಲಿದೆ ? ಈ ಭೂಭಾಗದಲ್ಲಿ ಅಮೆರಿಕವನ್ನು ಒಳಗೊಂಡ ಪೂರ್ಣ ಪ್ರಮಾಣದ ಯುದ್ಧದ ಸಾಧ್ಯತೆ ದೂರ ಸರಿದಿದೆ. ಇರಾಕ್ ಮತ್ತು ಅಫ್ಘಾನಿಸ್ತಾನದಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಪಡೆಯಲು ಅಮೆರಿಕಕ್ಕೆ ಸಾಧ್ಯ ಆಗಿಲ್ಲ. ಉತ್ತರ ಕೊರಿಯಾ ಜೊತೆಗಿನ ಪರಮಾಣು ಸಮಸ್ಯೆಯನ್ನಾಗಲೀ, ಚೀನಾ ಜೊತೆಗಿನ ವ್ಯಾಪಾರ ಸಮಸ್ಯೆಯನ್ನಾಗಲೀ ಬಗೆಹರಿಸಿಕೊಳ್ಳಲು ಅದಕ್ಕೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿವೇಕ ಇರುವ, ಅಮೆರಿಕದ ಯಾವೊಬ್ಬ ನಾಯಕ ಕೂಡ ಹೊಸ ಎದುರಾಳಿಯನ್ನು ಇದಿರುಗೊಳ್ಳಲು ಇಚ್ಛೆಪಡುವುದಿಲ್ಲ. ಆದರೆ ಯುದ್ಧ ನಡೆದದ್ದೇ ಆದಲ್ಲಿ ಕೊಲ್ಲಿಯ ಜೀವನಾಡಿ ಎನಿಸಿರುವ ಹರ್ಮುಜ್ ಜಲಸಂಧಿ ಅಪಾಯಕ್ಕೆ ಸಿಲುಕಿ ತೈಲಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತದೆ. ಯುದ್ಧ ಎದುರಾಗದೆಯೂ ಈಗಾಗಲೇ ಬೆಲೆ ಏರಿಕೆ ಆರಂಭ ಆಗಿದೆ. ಸುರಳಿ ಪರಿಣಾಮಕ್ಕೆ ಸಿಲುಕಿ ನಮ್ಮ ಆರ್ಥಿಕತೆಗೆ ತೀವ್ರ ಹೊಡೆತ ಬೀಳುತ್ತದೆ. ಕೊಲಿಯಲ್ಲಿ ಕೆಲಸ ಮಾಡುವ ಸುಮಾರು ನಲವತ್ತು ಲಕ್ಷ ಭಾರತೀಯರ ಭವಿಷ್ಯ ಕೂಡ ಕರಾಳ ಆಗಲಿದ್ದು ದೇಶದ ಒಳಗೆ ಅವರು ವಿದೇಶೀ ಹಣ ರವಾನೆ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ. ಕಾರ್ಮಿಕರು ದೇಶಕ್ಕೆ ಮರಳುವುದು ಹೆಚ್ಚಾಗಿ ನಮ್ಮ ಆರ್ಥಿಕತೆ ಮೇಲೆ ಮತ್ತಷ್ಟು ಹೊರೆ ಬೀಳಬಹುದು.
ಅಂತಹ ಭಯಾನಕ ಸನ್ನಿವೇಶದಲ್ಲಿ ನಾವು ಏನು ಮಾಡಬೇಕು ? ನಮ್ಮ ಆಯ್ಕೆಗಳು ಸೀಮಿತವಾಗಿವೆ – ಈಗ ನಾವು ಮತ್ತೊಂದು ದಿಕ್ಕಿನಲ್ಲಿಯಷ್ಟೇ ಯೋಚಿಸದೆ ಸೌಹಾರ್ದಯುತ ಪರಿಹಾರಕ್ಕಾಗಿ ಕೆಲಸ ಮಾಡಬೇಕಿದೆ. ಸಂಯಮ ಕಾಯ್ದುಕೊಳ್ಳುವಂತೆ ಎರಡೂ ದೇಶಗಳನ್ನು ಒತ್ತಾಯಿಸಿದ ಎಂಟು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಉದ್ವಿಗ್ನತೆ ಶಮನಗೊಳಿಸಲು ಸಕ್ರಿಯವಾಗಿ ತೊಡಗಿಕೊಂಡ ಇತರ ದೇಶಗಳಿಗಿಂತಲೂ ಭಾರತ ಉತ್ತಮ ಸ್ಥಾನದಲ್ಲಿದೆ. ಇರಾನ್ ಇಷ್ಟಪಡದ ಅಮೆರಿಕಕ್ಕೆ ಸಮೀಪ ಇದ್ದರೂ ಕೂಡ ನಾವು ಅಮೆರಿಕದ ಜೊತೆಗೆ ಕಾರ್ಯತಂತ್ರದ ಸಂಬಂಧ ಇರಿಸಿಕೊಂಡಿದ್ದೇವೆ ಹಾಗೂ ಇರಾನ್ ಜೊತೆಗೆ ನಾಗರಿಕ ಸಂಬಂಧಗಳನ್ನು ಹೊಂದಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಘನತೆ ಹೆಚ್ಚಿರುವ ಬೆಳವಣಿಗೆ ಜೊತೆಗೆ, ಒಬ್ಬ ಪರಿಣತ ಮತ್ತು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದ ರಾಜತಂತ್ರಜ್ಞ ಎಸ್. ಜೈಶಂಕರ್ ವಿದೇಶಾಂಗ ಸಚಿವರಾಗಿದ್ದಾರೆ. ( ಅವರು ಇತ್ತೀಚೆಗೆ ಇರಾನ್‌ಗೆ ಭೇಟಿ ನೀಡಿದ್ದರು ). ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ದೇಶದ ರಾಜಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಇದು ಸೂಕ್ತ ಸಮಯ. ಎರಡೂ ಕಡೆಯವರು ಭಾರತ ಹೇಳಿದ್ದನ್ನೆಲ್ಲಾ ಒಪ್ಪದೇ ಹೋದರೂ ನಮ್ಮ ಮಾತುಗಳಿಗೆ ಕಿವಿ ಕೊಡುತ್ತಾರೆ. ಇದರ ಜೊತೆ ಜೊತೆಗೆ ನಿರಂತರವಾಗಿ ಕಚ್ಚಾತೈಲ ಪೂರೈಕೆ ಖಚಿತಪಡಿಸಿಕೊಳ್ಳಲು, ಭಾರತ ಇತರೆ ಕಾರ್ಯಸಾಧುವಾದ ಆಯ್ಕೆಗಳನ್ನು ಅನ್ವೇಷಿಸಬೇಕು. ಮತ್ತೊಂದು ದೊಡ್ಡ ತೈಲ ಉತ್ಪಾದಕ ದೇಶವಾದ ವೆನೆಜುವೆಲಾ ಕೂಡ ಅಮೆರಿಕದ ನಿರ್ಬಂಧಕ್ಕೆ ಒಳಪಟ್ಟಿದ್ದು ನಾವು, ನೈಜೀರಿಯಾ, ಬ್ರೆಜಿಲ್ ಅಥವಾ ಅಂಗೋಲಾದಿಂದ ಆಮದು ಹೆಚ್ಚಿಸುವತ್ತ ಶೋಧ ನಡೆಸಬೇಕು. ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ಸಾಧ್ಯವಾದಷ್ಟೂ ಎದುರಿಸಲು ಸೌರಶಕ್ತಿ ಬಳಕೆ ಮತ್ತು ತೈಲ ಹೊರತಾದ ಪರ್ಯಾಯ ಇಂಧನಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಬಹುದು.