ಲಖಿಂಪುರ(ಉತ್ತರ ಪ್ರದೇಶ): ಮನೆ ಬಿಟ್ಟು ಹೋಗುತ್ತೇನೆಂದು ಬೆದರಿಕೆ ಹಾಕಿದ ಪತ್ನಿಯ ಮೂಗನ್ನು ಪತಿ ಕಚ್ಚಿರುವ ಘಟನೆ ಇಲ್ಲಿ ನಡೆದಿದೆ.
ಲಖಿಂಪುರದ ನೀಮ್‌ಗಾಂವ್ ಪ್ರದೇಶದ ಮುಡಿಯಾ ಗ್ರಾಮದಲ್ಲಿ ಕಳೆದ ಭಾನುವಾರ ಪ್ರಕರಣ ಬೆಳಕಿಗೆ ಬಂದಿದ್ದು, ಸಂತ್ರಸ್ತೆ ಸರೋಜಿನಿ ದೇವಿ (34) ಮೇಲೆ ಆಕೆಯ ಪತಿ ಮೂಲ್‌ಚಂದ್ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಕೆಲವು ಕೌಟುಂಬಿಕ ವಿವಾದಗಳಿಂದಾಗಿ ಮಹಿಳೆ ಸುಮಾರು ಆರು ತಿಂಗಳಿಂದ ಗಂಡನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆದ್ರೆ ಗ್ರಾಮದ ಮುಖ್ಯಸ್ಥರ ಸಲಹೆ ಮೇರೆಗೆ ಕಳೆದ ಬುಧವಾರ ಮನೆಗೆ ಮರಳಿದ್ದಳು. ಆದ್ರೆ ಭಾನುವಾರ ದಂಪತಿಯ ಜಗಳ ತಾರಕಕ್ಕೇರಿದ್ದು, ಪತಿ ಮಹಾಶಯ ತನ್ನ ಅರ್ಧಾಂಗಿಯ ಮೂಗನ್ನೇ ಕಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ತಾನು ತನ್ನ ತವರುಮನೆಗೆ ಹಿಂತಿರುಗುತ್ತೇನೆ ಎಂದು ಸರೋಜಿನಿ ಪತಿಗೆ ತಿಳಿಸಿದಾಗ, ಅದನ್ನೇ ಅವಮಾನವೆಂದು ಪರಿಗಣಿಸಿದ ಆತ ಸರೋಜಿನಿಗೆ ಸರಿಯಾಗಿ ಹೊಡೆದು ನಂತರ ಅವಳ ಮೂಗನ್ನು ಕಚ್ಚಿದ್ದಾನೆ.
ಪ್ರಕರಣ ಸಂಬಂಧ ನೀಮ್‌ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.