ನವದೆಹಲಿ: ಬಿಜೆಪಿಯ ಮಾಜಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಮೇಲೆ ಆರೋಪವಿರುವ ಉನ್ನಾವೋ ಅತ್ಯಾಚಾರ ಪ್ರಕರಣದ ತೀರ್ಪನ್ನು ದೆಹಲಿ ಕೋರ್ಟ್ ಇದೇ ಡಿಸೆಂಬರ್ 16ರಂದು ಪ್ರಕಟಿಸಲಿದೆ.
2017ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಕುಲ್ದೀಪ್ ಸಿಂಗ್ ಮೇಲಿದೆ. ಅಲ್ಲದೇ ಅತ್ಯಾಚಾರ ನಡೆದ ಕೆಲವು ದಿನಗಳ ಬಳಿಕ ಮತ್ತೆ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಳು. ಈ ಪ್ರಕರಣದ ಬೆನ್ನಲ್ಲೇ ಕುಲ್ದೀಪ್ರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು.
ಈ ಬಗ್ಗೆ ಸಿಬಿಐ, ಕೋರ್ಟ್ಗೆ ತನ್ನ ವಾದ ಮಂಡಿಸಿದ್ದು, ಪ್ರಕರಣದ ವಿಚಾರಣೆ ಡಿಸೆಂಬರ್ 2ರಂದು ಮುಗಿದಿತ್ತು. ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ತೀರ್ಪನ್ನು ಡಿ. 16ಕ್ಕೆ ಮುಂದೂಡಿತ್ತು.
ಈ ಅತ್ಯಾಚಾರ ಪ್ರಕರಣ ನಡೆದ ಬಳಿಕ, ಅತ್ಯಾಚಾರ ಸಂತ್ರಸ್ತೆ, ಆಕೆಯ ಲಾಯರ್ ಹಾಗೂ ಕುಟುಂಬಸ್ಥರು ಸಂಚರಿಸುತ್ತಿದ್ದ ಕಾರ್ ಮೇಲೆ ಟ್ರಕ್ ಹರಿದು ಇಬ್ಬರು ಕುಟುಂಬಸ್ಥರು ಸಾವನ್ನಪ್ಪಿದ್ದರು. ಇದು ಅಪಘಾತವಲ್ಲ, ಉದ್ದೇಶಿತ ಕೊಲೆ ಎಂದು ಸಂತ್ರಸ್ತೆ ಆರೋಪಿಸಿದ್ದಳು. ಈ ಪ್ರಕರಣದ ವಿಚಾರಣೆಯೂ ದೆಹಲಿ ಕೋರ್ಟ್ನಲ್ಲಿ ನಡೆದಿದೆ.
ಇತ್ತೀಚೆಗಷ್ಟೇ, ಅಂದರೆ ಡಿ.5 ರಂದು ಸಂತ್ರಸ್ತೆ ನ್ಯಾಯಾಲಯದಲ್ಲಿ ವಿಚಾರಣೆಗೆಂದು ಹಾಜರಾಗಲು ತೆರಳುತ್ತಿದ್ದ ಸಂದರ್ಭ ಜಾಮೀನಿನಿಂದ ಬಿಡುಗಡೆಯಾಗಿದ್ದ ಪ್ರಕರಣದ ಐವರು ಆರೋಪಿಗಳು ಆಕೆಗೆ ಬೆಂಕಿ ಹಚ್ಚಿದ್ದರು. ಸ್ಥಳೀಯರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಶೇ 90 ರಷ್ಟು ಸುಟ್ಟಿದ್ದ ಆಕೆಯ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಸಂತ್ರಸ್ತೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಳು. ಈ ಘಟನೆಯ ನಂತರ ದೇಶದಲ್ಲಿ ಪ್ರಕರಣದ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು. ತ್ವರಿತ ನ್ಯಾಯಕ್ಕಾಗಿ ಆಗ್ರಹ ವ್ಯಕ್ತವಾಗಿತ್ತು.