ಚೆನ್ನೈ: ತಮಿಳುನಾಡು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂದು ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾಗೆ ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಂದು ಅಮಿತ್ ಶಾ ಚಾಲನೆ ನೀಡಲಿದ್ದು, ರಾಜಕೀಯ ದೃಷ್ಟಿಯಿಂದಲೂ ಇಂದಿನ ಭೇಟಿ ಮಹತ್ವ ಪಡೆದುಕೊಂಡಿದೆ. ಇನ್ನು ಅಮಿತ್ ಶಾ ಆಗಮನ ಹಿನ್ನೆಲೆ ತಮಿಳುನಾಡು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಕ್ಷದ ಕಚೇರಿಯಲ್ಲಿ ಮುಖಂಡರು ಹಾಗೂ ಪದಾಧಿಕಾರಿಗಳ ಉದ್ದೇಶಿಸಿ ಸಭೆ ನಡೆಸಲಿದ್ದಾರೆ.
ಗೃಹ ಸಚಿವರ ಭೇಟಿ ಹಿನ್ನೆಲೆ ಚೆನ್ನೈನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, 16 ಉಪ ವರಿಷ್ಠಾಧಿಕಾರಿಗಳು, 3 ಸಾವಿರ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸಹ ಸ್ಥಳದಲ್ಲಿದ್ದಾರೆ. ಸಂಜೆ 4.30ರ ಸುಮಾರಿಗೆ ಲೀಲಾ ಪ್ಯಾಲೇಸ್ ತಲುಪಲಿರುವ ಅಮಿತ್ ಶಾ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ.
ಇದಲ್ಲದೇ ಅಮಿತ್ ಶಾ ಸಮ್ಮುಖದಲ್ಲಿಯೇ ಡಿಎಂಕೆ ಉಚ್ಛಾಟಿತ ಶಾಸಕ ಕೆ.ಪಿ ರಾಮಲಿಂಗಂ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಇನ್ನು ಇದೇ ವೇಳೆ, ಕರುಣಾನಿಧಿ ಪುತ್ರ ಎಂ.ಕೆ ಅಳಗಿರಿ ಅಮಿತ್ ಶಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ರಾಜಕೀಯ ಕುರಿತ ಚರ್ಚೆಗೆ ನಾಂದಿಯಾಗಲಿದೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆಯೂ ಅಮಿತ್ ಶಾ ಚುನಾವಣಾ ದೃಷ್ಟಿಯಿಂದ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನೂ ಭೇಟಿಯಾಗುವ ಸಾಧ್ಯತೆ ಇದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಜಿನಿ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್, ‘ಅವರು ರಜಿನಿಕಾಂತ್ ಅವರನ್ನು ಭೇಟಿಯಾಗಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಭೇಟಿ ಕುರಿತು ಸುಳಿವು ನೀಡಿದ್ದರು.