ನೊಯ್ಡಾ (ಉತ್ತರಪ್ರದೇಶ): ತಾನು ಮಾಡುತ್ತಿರುವ ಟಿಕ್ಟಾಕ್ ವಿಡಿಯೋಗಳಿಗೆ ಯಾರೂ ಲೈಕ್ ಮಾಡುತ್ತಿಲ್ಲ ಎಂದು ಖಿನ್ನತೆಗೆ ಒಳಗಾದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೊಯ್ಡಾದ 39ನೇ ಸೆಕ್ಟಾರ್ನ ಸಲಾರ್ಪುರದಲ್ಲಿ ವಾಸಿಸುತ್ತಿದ್ದ 18 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಪೂರಕ ಎಂಬಂತೆ, ಈತ ಚೀನಾ ಮೂಲದ ಟಿಕ್ಟಾಕ್ ಆ್ಯಪ್ನಲ್ಲಿ ಸಕ್ರಿಯನಾಗಿ ವಿಡಿಯೋ ಮಾಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಒಳಗಿನಿಂದ ಬೋಲ್ಟ್ ಹಾಕಿದ ಬಾಗಿಲು ಮುರುದಿದ್ದಾರೆ. ಕೋಣೆ ಒಳಗೆ ಫ್ಯಾನ್ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಯುವಕನ ದೇಹ ಕಂಡುಬಂದಿದೆ. ಪೊಲೀಸರು ಸ್ಥಳೀಯರನ್ನು ಈ ಬಗ್ಗೆ ವಿಚಾರಿಸಿದಾಗ, 'ಟಿಕ್ಟಾಕ್ ವಿಡಿಯೋಗಳಿಗೆ ಲೈಕ್ ಬಾರದಿದ್ದಕ್ಕೆ ಯುವಕ ಕೆಲ ದಿನಗಳಿಂದ ಬೇಸರಕ್ಕೆ ಒಳಗಾಗಿದ್ದ' ಎಂದಿದ್ದಾರೆ.
ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಕಂಡು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ನೋಯ್ಡಾ ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ತಿಳಿಸಿದ್ದಾರೆ.