ಉಜ್ಜಯಿನಿ (ಮಧ್ಯಪ್ರದೇಶ) : ಪ್ರಸಿದ್ಧ ಶ್ರದ್ದಾ ಕೇಂದ್ರಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನದ ಭಸ್ಮಾರತಿ ವಿಶೇಷ ಕಾರ್ಯಕ್ರಮ ಇಂದು ಮುಂಜಾನೆ 4 ಗಂಟೆಗೆ ಪ್ರಾರಂಭವಾಯಿತು. ಈ ಬಾರಿ ಕೊರೊನಾ ಹಿನ್ನೆಲೆ ಭಕ್ತರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಪಂಡಿತ ಪುರೋಹಿತರು ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ನಿಮಿತ್ತ ಗರ್ಭಗುಡಿಯನ್ನು ಮಲ್ಲಿಗೆ ಹೂವುಗಳಿಂದ ಅಲಂಕರಿಸಲಾಗಿತ್ತು.
ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ಕೂಡ ಒಂದಾಗಿದೆ. ಪ್ರತಿ ವರ್ಷ ನಡೆಯುವ ಇಲ್ಲಿನ ಭಸ್ಮಾರತಿ ಪ್ರಮುಖ ಕಾರ್ಯಕ್ರಮವಾಗಿದೆ. ಭಸ್ಮಾರತಿ ಹಿನ್ನೆಲೆ ತಡ ರಾತ್ರಿ 2:30ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಬಳಿಕ ಬಾಬಾ ಮಹಾಕಾಳೇಶ್ವರನಿಗೆ ನೀರಿನ ಅಭಿಷೇಕ, ಪಂಚಾಮೃತದ ಅಭಿಷೇಕ ಮಾಡಿ, ನಂತರ ಭಸ್ಮಾರತಿ ಮಾಡಲಾಯಿತು. ಪ್ರತಿ ವರ್ಷ ಭಸ್ಮಾರತಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಿದ್ದರು. ದೇವಸ್ಥಾನ ನಂದಿಹಾಲ್ , ಗಣೇಶ ಮಂಟಪ ಪ್ರದೇಶಗಳು ಭಕ್ತರಿಂದ ತುಂಬಿರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಭೀತಿಯಿಂದ ಭಕ್ತರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಕೇವಲ ಪುರೋಹಿತರು ಮಾತ್ರ ಪೂಜೆ ನೆರವೇರಿಸಿದರು.
ಇಂದು ಸಂಜೆ 4 ಗಂಟೆಗೆ ಮಹಾಕಾಳೇಶ್ಬರ ತನ್ನ ಭಕ್ತರ ಸ್ಥಿತಿಗತಿಯನ್ನು ಅರಿಯಲು ನಗರ ಪ್ರದಕ್ಷಿಣೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲೂ ಭಕ್ತರಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ. ಆದ್ದರಿಂದ ಭಕ್ತರು ಮಹಾಕಾಳೇಶ್ವರ ದೇವಸ್ಥಾನ ವೆಬ್ಸೈಟ್, ಫೇಸ್ಬುಕ್ ಪೇಜ್ ಅಥವಾ ಟ್ವಿಟರ್ ಹ್ಯಾಂಡಲ್ ಮುಖಾಂತರ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದು.