ಹೈದಾರಾಬಾದ್: ಕೊರೊನಾ... ನೊವೆಲ್ ಕೊರೊನಾ ಭಾರತವನ್ನು ಸ್ತಬ್ಧವಾಗಿಸಿರುವ ಮಹಾಮಾರಿ. 21 ದಿನ ಕರ್ಫ್ಯೂಗೆ ದೂಡಿಸಿರುವ ಡೆಡ್ಲಿ ವೈರಸ್ ಧಾರ್ಮಿಕ ಹಬ್ಬ, ಹರಿದಿನಗಳ ಮೇಲೂ ಪರಿಣಾಮ ಬೀರಿದೆ.
ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದ್ರೆ ಕಿಲ್ಲರ್ ಕೋವಿಡ್19 ಹಬ್ಬಕ್ಕೆ ತಣ್ಣೀರು ಎರಚಿದೆ. ವಿಶ್ವದ ನಾನಾ ಭಾಗಗಳಲ್ಲಿರುವ ಎಲ್ಲ ತೆಲುಗು ಭಾಷಿಕರು ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ಯುಗಾದಿಯನ್ನು ಹೊಸ ವರ್ಷವನ್ನಾಗಿ ಸ್ವೀಕರಿಸುತ್ತಾರೆ. ಮಾವಿನ ತೋರಣ ಕಟ್ಟಿ, ಬೇವು ಬೆಲ್ಲ ಹಂಚಿ, ಹೂಗಳಿಂದ ಮನೆಗಳನ್ನು ಸಿಂಗರಿಸುತ್ತಿದ್ದರು. ಮಾತ್ರವಲ್ಲದೆ, ಬಂಧು-ಬಳಗ, ಸ್ನೇಹಿತರಿಗೆ ಶುಭಾಶಯಗಳನ್ನು ಕೋರುವ ಮೂಲಕ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆದ್ರೆ ಇದಕ್ಕೆಲ್ಲಾ ಈ ಬಾರಿ ಬ್ರೇಕ್ ಬಿದ್ದಿದೆ. ಜನ ಒಟ್ಟಾಗಿ ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈದಾರಾಬಾದ್‌ನ ದಿಲ್‌ಸುಖ್‌ನಗರದ ದಿವ್ಯಾ ಎಂಬ ಯುವತಿಗೆ ಬೇಸರ ವ್ಯಕ್ತಪಡಿಸಿದ್ರೂ, ಲಾಕ್‌ಡೌನ್‌ನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇನೆ ಎನ್ನುತ್ತಾರೆ.
ಇಂದು ಬೆಳಗ್ಗೆ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತಾದ್ರೂ 11 ಗಂಟೆ ನಂತರ ಕರ್ಫ್ಯೂ ಕಟ್ಟುನಿಟ್ಟಾಗಿದೆ. ಒಂದು ವಾರ ಮೊದಲೇ ಜನ ಹಬ್ಬಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ನಗರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡೋದು ಸರ್ವೇ ಸಾಮಾನ್ಯ. ಆದ್ರೆ ಈ ಬಾರಿ ಆದ್ಯಾವುದೂ ಇಲ್ಲವಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ 21 ದಿನ ಇಡೀ ದೇಶವನ್ನ ಲಾಕ್‌ಡೌನ್ ಗೆ ಮಾನವಿ ಮಾಡಿದ್ದಾರೆ. ಇದರ ಪರಿಣಾಮ ಎಂಬಂತೆ ಮುತ್ತಿನ ನಗರಿ ಹೈದಾರಾಬಾದ್ ಲಾಕ್‌ಡೌನ್‌ಆಗಿದ್ದು, ಜನರಿಲ್ಲದೆ ಬಣ ಬಣ ಅಂತಿದೆ. ಅತಿ ಹೆಚ್ಚಾಗಿ ಜನಸಂದಣಿಯಿಂದ ಕೂಡಿರುತ್ತಿದ್ದ ಇತಿಹಾಸಿಕ ಚಾರ್ಮಿನಾರ್ ಖಾಲಿ ಖಾಲಿಯಾಗಿದೆ.
ಅಂಗಡಿ, ಮುಂಗಟ್ಟುಗಳನ್ನು ಸಂಪೂರ್ಣವಾಗಿದೆ ಬಂದ್ ಮಾಡಲಾಗಿದೆ. ಒಂದೆರೆಡು ಹೂವಿನ ಅಂಗಡಿಗಳನ್ನು ಹೊರತುಪಡಿಸಿದ್ರೆ ಯಾವುದೇ ರೀತಿಯ ವಹಿವಾಟು ಕಂಡು ಬಂದಿಲ್ಲ. ಹೈದಾರಾಬಾದ್ ಮಾತ್ರವಲ್ಲದೆ ವಿಜಯವಾಡ ಸೇರಿದಂತೆ ಉಭಯ ರಾಜ್ಯಗಳ ಬಹುತೇಕ ನಗರಗಳ ಪರಿಸ್ಥಿತಿ ಕೂಡ ಹೀಗೆ ಇದೆ. ಆಂಧ್ರಪ್ರದೇಶದಲ್ಲಿ ಈವರೆಗೆ 8 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ರೆ, ತೆಲಂಗಾಣದಲ್ಲಿ 37 ಮಂದಿಗೆ ಕೋವಿಡ್ ಪಾಸಿಟಿವ್ ಇದೆ. ಓರ್ವ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎನ್ನಲಾಗಿದೆ.