ಕಡಂಬಾ (ತೆಲಂಗಾಣ): ಪೊಲೀಸರು ಹಾಗೂ ನಕ್ಸಲರ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲರು ಮೃತಪಟ್ಟ ಘಟನೆ ಕೋಮರಂ ಭೀಮ್ ಜಿಲ್ಲೆಯ ಅಸೀಫಾಬಾದ್ ನಗರದಲ್ಲಿ ನಡೆದಿದೆ.
ಇಲ್ಲಿನ ಕಡಂಬಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಕ್ಸಲರಿಗೆ ಶೋಧ ಕಾರ್ಯ ನಡೆಸಿದ್ದರು.
ಈ ವೇಳೆ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ ಸತ್ಯನಾರಾಯಣ ಅವರು ಇಬ್ಬರು ನಕ್ಸಲರ ಸಾವನ್ನು ದೃಢಪಡಿಸಿದ್ದು, ಪೊಲೀಸರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ನಕ್ಸಲ್ ಮುಖಂಡನಾದ ಎಂ. ಅಡೆಲ್ಲು ಅಲಿಯಾಸ್ ಭಾಸ್ಕರ್ ತಪ್ಪಿಸಿಕೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ನಾನೂರಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದರು.
ಸ್ಥಳದಲ್ಲಿ ಸುಮಾರು ಆರರಿಂದ ಏಳು ಮಂದಿ ನಕ್ಸಲರಿದ್ದು, ಉಳಿದವರು ತಪ್ಪಿಸಿಕೊಂಡಿದ್ದಾರೆ. ಇದರ ಜೊತೆಗೆ ಎರಡು ಶಸ್ತ್ರಗಳು ಹಾಗೂ ಎರಡು ಬ್ಯಾಗ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.