ಕಾರ್ಬಿ ಆಂಗ್ಲಾಂಗ್ (ಅಸ್ಸಾಂ): ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಾಮಾಚಾರ ಶಂಕೆಯಿಂದ ಗುಂಪೊಂದು ಇಬ್ಬರನ್ನು ಹತ್ಯೆ ಮಾಡಿದ್ದು, ಈ ಸಂಬಂಧ 9 ಮಂದಿಯನ್ನು ಬಂಧಿಸಲಾಗಿದೆ.
ವಾಮಾಚಾರವನ್ನು ಮಾಡುತ್ತಿದ್ದಾರೆ ಎಂದು ಶಂಕಿಸಿ ಸ್ಥಳೀಯರು ಅವರನ್ನು ಕೊಂದಿದ್ದು, ಸ್ಥಳೀಯ ಪಂಚಾಯಿತಿಯು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ಧಾರೆ.
"ನಾವು ಇಲ್ಲಿಯವರೆಗೆ ಒಂಬತ್ತು ಜನರನ್ನು ಬಂಧಿಸಿದ್ದೇವೆ. ಇಬ್ಬರನ್ನು ಕೊಂದಿರುವುದಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ವಾಮಾಚಾರ ಮಾಡುವ ಅನುಮಾನದ ಮೇಲೆ ಅವರನ್ನು ಕೊಂದಿದ್ದಾರೆ" ಎಂದು ಕಾರ್ಬಿ ಆಂಗ್ಲಾಂಗ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಡೊಕ್ಮೊಕಾ ಪೊಲೀಸ್ ಠಾಣಾ ವ್ಯಾಪ್ತಿಯ ರೋಹಿಮಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ರೋಮಾಬಾಯಿ ಹಲುವಾ ಗೌರ್ (50) ಮತ್ತು ಬಿಜಯ್ ಗೌರ್ (28) ಎಂದು ಗುರುತಿಸಲಾಗಿದೆ.