ಸಿಂಗ್ರೌಲಿ(ಮಧ್ಯಪ್ರದೇಶ): ಜಿಲ್ಲೆಯ ಕಲ್ಲಿದ್ದಿಲು ಇಂಧನ ಘಟಕವೊಂದರ ಬೂದಿಯ ಸಂಗ್ರಹಾಗಾರ ಒಡೆದು ಸಂಭವಿಸಿದ ಪ್ರವಾಹದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಸಿಂಗ್ರೌಲಿ ಜಿಲ್ಲೆಯಲ್ಲಿರುವ ರಿಲಯನ್ಸ್ ಕಂಪನಿಯ ಕಲ್ಲಿದ್ದಿಲು ಇಂಧನ ಘಟಕದ ಬೂದಿ ಸಂಗ್ರಹ ಡ್ಯಾಂ ಒಡೆದು ಸುತ್ತಲಿನ ಪ್ರದೇಶಗಳಲ್ಲಿ ಬೂದಿಯ ಕೆಸರಿನ ಪ್ರವಾಹ ಉಂಟಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಘಟಕದ ಹತ್ತಿರ ವಾಸಿಸುತ್ತಿದ್ದ ಐವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಿಸುವ ಕಾರ್ಯ ಸಾಗಿದೆ. ಪ್ರವಾಹದಿಂದ ಮೃತಪಟ್ಟಿರುವ ಅಭಿಷೇಕ ಕುಮಾರ ಶಾ (8) ಹಾಗೂ ದಿನೇಶ ಕುಮಾರ (35) ಎಂಬುವರ ಶವ ಪತ್ತೆಯಾಗಿದೆ. ಕಳೆದೊಂದು ವರ್ಷದಲ್ಲಿ ಇಂಥ ಮೂರು ದುರ್ಘಟನೆಗಳು ಸಿಂಗ್ರೌಲಿಯಲ್ಲಿ ಜರುಗಿವೆ. ಪ್ರಸ್ತುತ ಘಟನೆ ರಿಲಯನ್ಸ್ ಪವರ್ ಕಂಪನಿಯ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಜಿಲ್ಲಾ ಕಲೆಕ್ಟರ್ ಕೆವಿಎಸ್ ಚೌಧರಿ ಹೇಳಿದರು.
ಬೂದಿಯ ಕೆಸರಿನಿಂದ ಸುತ್ತಲಿನ ಹಳ್ಳಿಗಳ ನೂರಾರು ಎಕರೆ ಫಸಲು ನಾಶವಾಗಿದ್ದು, ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಕಮಲನಾಥ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.