ಶಿವಪುರಿ (ಮಧ್ಯಪ್ರದೇಶ): ಇಲ್ಲಿನ ಪಂಚಾಯಿತಿ ಕಚೇರಿ ಸಮೀಪದಲ್ಲಿ ಬಯಲು ಶೌಚಕ್ಕೆ ಕುಳಿತಿದ್ದ ದಲಿತ ಸಮುದಾಯದ ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಭಾವ್ಕೇಧಿ ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ಇಬ್ಬರು ಮಕ್ಕಳನ್ನು ಹತ್ಯೆ ಮಾಡಲಾಗಿದೆ ಎಂದು ಸಿರ್ಸೋದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್ಎಸ್ ಧಕಡ್ ತಿಳಿಸಿದ್ದಾರೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ, ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಹಕೀಮ್ ಯಾದವ್ ಹಾಗೂ ರಾಮೇಶ್ವರ್ ಯಾದವ್ ಹತ್ಯೆ ಮಾಡಿದ ಆರೋಪಿಗಳಾಗಿದ್ದು, ಕಾನೂನಿನಿಂದ ಕಣ್ತಪ್ಪಿಸಿಕೊಳ್ಳಲು ಮಾನಸಿಕ ಅಸ್ವಸ್ಥರಂತೆ ನಾಟಕವಾಡುತ್ತಿದ್ದಾರೆ ಎಂದು ಮೃತರ ಕುಟುಂಬವರ್ಗದವರು ಆರೋಪಿಸಿದ್ದಾರೆ.