ಔರಂಗಾಬಾದ: ಕೊರೊನಾ ವೈರಸ್ ಸೋಂಕಿತ ಕೈದಿಗಳಿಬ್ಬರು ಕೊರೊನಾ ಚಿಕಿತ್ಸಾ ಕೇಂದ್ರದಿಂದ ಪರಾರಿಯಾದ ಘಟನೆ ಸೋಮವಾರ ತಡರಾತ್ರಿ ಇಲ್ಲಿ ನಡೆದಿದೆ. ಅಕ್ರಂ ಖಾನ್ ಗಯಾಸ್ ಖಾನ್ ಮತ್ತು ಸಯ್ಯದ್ ಸೈಫ್ ಸೈಯ್ಯದ್ ಇವರೇ ಔರಂಗಾಬಾದಿನ ಕಿಲೆ ಅರ್ಕ್ ಪ್ರದೇಶದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರದಿಂದ ಪರಾರಿಯಾದ ಕೈದಿಗಳಾಗಿದ್ದಾರೆ.
ಔರಂಗಾಬಾದ್ನ ಹರ್ಸೂಲ್ ಕಾರಾಗೃಹದ 29 ಕೈದಿಗಳಿಗೆ ಕೋವಿಡ್ ಸೋಂಕು ತಗುಲಿರುವುದಾಗಿ ಶನಿವಾರ ಪತ್ತೆಯಾಗಿತ್ತು. ಇವರೆಲ್ಲರನ್ನು ಕಿಲೆ ಅರ್ಕ್ ಪ್ರದೇಶದ ಸರ್ಕಾರಿ ಅತಿಥಿ ಗೃಹದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇವರಲ್ಲಿ ಇಬ್ಬರು ಮಧ್ಯರಾತ್ರಿ 12 ರ ಸುಮಾರಿಗೆ ಶೌಚಾಲಯಕ್ಕೆ ಹೋಗಬೇಕೆಂಬ ನೆಪದಿಂದ ಎರಡನೇ ಮಹಡಿಯಲ್ಲಿರುವ ಶೌಚಾಲಯಕ್ಕೆ ಹೋಗಿದ್ದರು. ಆದರೆ, ಇಬ್ಬರೂ ಖದೀಮರು ಶೌಚಾಲಯದ ಕಿಟಕಿಯ ಗ್ರಿಲ್ ಮುರಿದು ಪರಾರಿಯಾಗಿದ್ದಾರೆ.
ಚಿಕಿತ್ಸಾ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಪಹರೆ ಇದ್ದರೂ ಇಬ್ಬರು ಕೈದಿಗಳು ಎಲ್ಲರ ಕಣ್ತಪ್ಪಿಸಿ ಓಡಿ ಹೋಗಿದ್ದು, ಭದ್ರತಾ ವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೈದಿಗಳು ತಪ್ಪಿಸಿಕೊಳ್ಳುತ್ತಿರುವುದನ್ನು ಕೆಲ ಯುವಕರು ನೋಡಿದ್ದು, ಪೊಲೀಸರ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಎಂದೂ ಹೇಳಲಾಗುತ್ತಿದೆ.