ಮಹಾರಾಷ್ಟ್ರ: ತೆಲಂಗಾಣದಿಂದ ರಾಜಸ್ಥಾನಕ್ಕೆ ಅಗತ್ಯ ಸರಕುಗಳನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್‌ಗಳಲ್ಲಿ ಸುಮಾರು 300ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದುದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಆದೇಶ ಹೊರಡಿಸಿದ್ದು, ಇದರ ನಡುವೆ ಹತಾಶರಾದ ವಲಸೆ ಕಾರ್ಮಿಕರು ಮನೆಗೆ ತೆರಳುತ್ತಿರುವ ಕುರಿತು ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ತಪಾಸಣೆ ನಡೆಸುತ್ತಿದ್ದರು.
ಈ ವೇಳೆ, ತೆಲಂಗಾಣದಿಂದ ಗಡಿ ಜಿಲ್ಲೆ ಯವತ್ಮಾಲ್‌ನಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ 2 ಕಂಟೇನರ್ ಟ್ರಕ್‌ಗಳನ್ನು ತಡೆದು ತಪಾಸಣೆ ನಡೆಸಿತ್ತು. ಈ ವೇಳೆ ಪೊಲೀಸರು ಕಂಟೇನರ್‌ನೊಳಗೆ ಬರೋಬ್ಬರಿ 300ಕ್ಕೂ ಹೆಚ್ಚು ಕಾರ್ಮಿಕರನ್ನು ಕಂಡು ಅಚ್ಚರಿಗೊಳಗಾಗಿದ್ದರು.
ಇತರ ವಾಹನಗಳ ಸಂಚಾರಕ್ಕೆ ಬಿಗಿ ನಿರ್ಬಂಧಗಳು ಇರುವುದರಿಂದ ಮನೆಗಳಿಗೆ ತೆರಳಬೇಕೆಂಬ ಉದ್ದೇಶದಿಂದ ಕಾರ್ಮಿಕರನ್ನು ಕಂಟೇನರ್ ಮೂಲಕ ರಾಜಸ್ಥಾನಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗುತ್ತಿದೆ.