ಹೈದರಾಬಾದ್: ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಹಾಜರಾಗದೆ ವಿದೇಶಕ್ಕೆ ಹೋಗಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಮುಖಂಡ ಲಂಕಾ ದಿನಕರ್ 'ಟ್ವಿಟರ್ ಗಾಂಧಿ' ಎಂದು ಕರೆದಿದ್ದಾರೆ.
ರಾಹುಲ್ ಗಾಂಧಿ ಟ್ವಿಟರ್ ಗಾಂಧಿಯಾಗಿದ್ದಾರೆ. ಅವರು ವಿಹಾರಕ್ಕಾಗಿ ವಿದೇಶಕ್ಕೆ ಹೋಗಿದ್ದರಿಮದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಕಂಡು ಬಂದಿಲ್ಲ. ರಾಹುಲ್ ಬೇಜವಾಬ್ದಾರಿಯುತ ಸಂಸದರಾಗಿದ್ದು, ನಿಜ ಸಂಗತಿಗಳನ್ನು ಗಮನಿಸದೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಕೃಷಿ ಮಸೂದೆಗಳನ್ನು ವಿರೋಧಿಸಿಸುತ್ತಿರುವ ಬಗ್ಗೆ ಮಾತನಾಡಿದ ದಿನಕರ್, ರಾಹುಲ್ ಸಂಸತ್ತಿನ ಮಾನ್ಸೂನ್ ಅಧಿವೇಶನವನ್ನು ಉದ್ದೇಶಪೂರ್ವಕವಾಗಿ ಬಿಟ್ಟಿದ್ದಾರೆ. ಈಗ ಅವರು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಟ್ವೀಟ್ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರೈತರ ಅನುಕೂಲಕ್ಕಾಗಿ ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದೆ. ರಾಹುಲ್ ವಿಷಯವನ್ನು ಓದಿ ಮತ್ತು ಅರ್ಥ ಮಾಡಿಕೊಂಡು ನಂತರ ಸರ್ಕಾರವನ್ನು ಪ್ರಶ್ನಿಸುವಂತೆ ಸಲಹೆ ನೀಡುತ್ತೇವೆ. ಆದರೆ ಸರಿಯಾದ ಅಧ್ಯಯನವಿಲ್ಲದೆ ಸರ್ಕಾರವನ್ನು ಟೀಕಿಸುವುದಕ್ಕೆ ಅವರು ಒಗ್ಗಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಮೂರು ಮಸೂದೆಗಳನ್ನು ಅಂಗೀಕರಿಸಿದ ನಂತರ ಕೇಂದ್ರ ಸರ್ಕಾರವು ರೈತರ ಹಲವಾರು ಕೃಷಿ ಉತ್ಪನ್ನಗಳಿಗೆ ಎಂಎಸ್ಪಿಯನ್ನು ಹೆಚ್ಚಿಸಿದೆ. ಈ ಮಸೂದೆಗಳನ್ನು ಅಂಗೀಕರಿಸಿದ ನಂತರ, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಉತ್ತಮ ಬೆಲೆ ಪಡೆಯುವುದು ಅವರಿಗೆ 'ಒನ್ ನೇಷನ್ - ಒನ್ ಮಾರ್ಕೆಟ್' ಆಗಿದೆ. ಈ ಆಯ್ಕೆಯಲ್ಲಿ ರೈತರಿಗೆ ಹೆಚ್ಚಿನ ಅವಕಾಶ ಇರುವುದರಿಂದ ಎಂಎಸ್‌ಪಿಗಿಂತ ಹೆಚ್ಚಿನ ಬೆಲೆ ಪಡೆಯಬಹುದು ಎಂದು ಹೇಳಿದ್ದಾರೆ.