ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ ಹಾಗೂ ಪುತ್ರನೊರ್ವ ಅಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದೀಗ ಅದಕ್ಕೆ ವ್ಯಾಪಕ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿದೆ.
ಜೂನ್.19ರಂದು ರಾತ್ರಿ 9 ಗಂಟೆ ಬಳಿಕವೂ ಅಂಗಡಿ ತೆರೆದಿದ್ದ ಕಾರಣ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ಠಾಣೆಗೆ ತೆರಳಿದ್ದ ಅವರ ಮಗ ಫೆನಿಕ್ಸ್ನನ್ನು ವಶಕ್ಕೆ ಪಡೆದುಕೊಂಡಿದ್ದರು. ಜತೆಗೆ ಅವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ತಂದೆಯನ್ನ ರಿಲೀಸ್ ಮಾಡುವಂತೆ ಪ್ರತಿಭಟನೆ ನಡೆಸಿದ್ದ ಫೆನಿಕ್ಸ್ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಜತೆಗೆ ಕಸ್ಟಡಿಯಲ್ಲಿದ್ದ ತಂದೆ ಜಯರಾಜ್ ಮೇಲೂ ಥಳಿಸಿದ್ದರು. ಇದರಿಂದ ಅವರಿಬ್ಬರು ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಖುಷ್ಬು, ಜೈರಾಮ್ ರವಿ, ಸಂಯುಕ್ತ ಹೆಗ್ಡೆ, ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜ್ ಹಿನ್ನಲೆ ಗಾಯಕಿ ಸುಚಿ ಮಿರ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಬೇಡಿಕೆ ಇಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪಳನಿಸ್ವಾಮಿ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು, ಮನೆಯಲ್ಲಿ ಒಬ್ಬರಿಗೆ ಅವರ ವಿದ್ಯಾರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವ ವಿಶ್ವಾಸ ನೀಡಿದ್ದಾರೆ.