ಹೈದರಾಬಾದ್: ವಿವಿದ ಬೇಡಿಕೆ ಈಡೇರಿಕೆಗಾಗಿ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ನೌಕರರು ರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಬೆಳಗ್ಗೆ 6 ಗಂಟೆ ಒಳಗಾಗಿ ಕೆಲಸಕ್ಕೆ ಹಾಜರಾಗದವರು ನೌಕರಿ ಕಳೆದುಕೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ನಿನ್ನೆ ರಾತ್ರಿಯೇ ಆದೇಶ ಹೊರಡಿಸಿದ್ದ ತೆಲಂಗಾಣ ರಾಜ್ಯ ಸರ್ಕಾರ, ಮುಷ್ಕರ ಕೈಬಿಟ್ಟು, ಬೆಳಗ್ಗೆ 6 ಗಂಟೆಗೆ ಬಂದು ಕೆಲಸಕ್ಕೆ ಹಾಜರಾಗಿ. ಇಲ್ಲದಿದ್ದರೆ ನಿಮ್ಮ ಕೆಲಸ ಕಳೆದುಕೊಳ್ಳಲು ನೀವೇ ಜವಾಬ್ದಾರರಾಗುತ್ತೀರಾ ಎಂದು ಆದೇಶಿಸಿತ್ತು.
ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ರಚಿಸಲಾದ ಐಎಎಸ್ ಅಧಿಕಾರಿಗಳ ಮೂರು ಸದಸ್ಯರ ಸಮಿತಿಯನ್ನೂ ಸರ್ಕಾರ ವಿಸರ್ಜಿಸಿದೆ. ಅಲ್ಲದೇ ಯಾವುದೇ ಯೂನಿಯನ್ ಮುಖಂಡರೊಂದಿಗೆ ಇನ್ನು ಮುಂದೆ ಮಾತುಕತೆ ನಡೆಸುವುದಿಲ್ಲ ಎಂದು ಘೋಷಿಸಿದೆ.
ಸುಮಾರು 5 ಸಾವಿರ ಬೇರೆ ಚಾಲಕರು ತಾವು ವಾಹನ ಚಾಲನೆ ಮಾಡುವುದಾಗಿ ಮುಂದೆ ಬಂದಿದ್ದಾರೆ. ಅವರ ಮೂಲಕ ಬಸ್ಗಳನ್ನ ಓಡಿಸಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.