ನವದೆಹಲಿ: ಭಾರತ, ರಷ್ಯಾದೊಂದಿಗೆ ಎಸ್-400 ವಾಯು ರಕ್ಷಣಾ ಕ್ಷಿಪಣಿ ಖರೀದಿ ಒಪ್ಪಂದ ಕೈಬಿಟ್ಟರೆ, ಇದಕ್ಕಿಂತ ದೊಡ್ಡ ರಕ್ಷಣಾ ವ್ಯಾಪಾರದ ಕೊಡುಗೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕ ತಯಾರಿಸಿದ 5ನೇ ತಲೆಮಾರಿನ ಎಫ್-35 ಫೈಟರ್ ಜೆಟ್ ಅನ್ನು ವಾಯುಪಡೆ ಹಾಗೂ ನೌಕಪಡೆಗೆ ಬಳಸಬಹುದಾಗಿದೆ. ಇದು ₹ 37 ಸಾವಿರ ಕೋಟಿ (5.43 ಬಿಲಿಯನ್ ಡಾಲರ್) ಮೊತ್ತದ ಷರತ್ತುಬದ್ದ ರಕ್ಷಣಾ ಒಪ್ಪಂದ ಇದಾಗಿದ್ದು, ಟ್ರಂಪ್ ಅವರು ಪ್ರಧಾನಿ ಮೋದಿ ಮುಂದೆ ಈ ಪ್ರಸ್ತಾಪ ಇಟ್ಟಿದ್ದಾರೆ ಎನ್ನಲಾಗಿದೆ.
ರಷ್ಯಾ ಜೊತೆಗಿನ ಐತಿಹಾಸಿಕ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದದಿಂದ ಹಿಂದೆ ಸರಿಯುವಂತೆ ಭಾರತಕ್ಕೆ ಅಮೆರಿಕ ಒತ್ತಡ ಹಾಕುತ್ತಿದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ ಎಸ್-400 ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಾಷಿಂಗ್ಟನ್, 'ಭವಿಷ್ಯದ ಸುಧಾರಿತ ತಂತ್ರಜ್ಞಾನಗಳ ಒಪ್ಪಂದದ ಮೇಲೆ ಇದು ಪರಿಣಾಮ ಬೀರಲಿದೆ' ಎಂದು ಎಚ್ಚರಿಸಿತ್ತು.
ಭಾರತ ಈಗಾಗಲೇ ಎಸ್-400 ಕ್ಷಿಪಣಿ ಒಡಂಬಡಿಕೆಗೆ ಸಹಿ ಮಾಡಿದ್ದು, ಭಾರತ ನ್ಯಾಟೋ ಮಿತ್ರ ಕೂಟಗಳತ್ತ ದೃಷ್ಟಿನೆಟ್ಟು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಒಪ್ಪಂದ ರದ್ದಾಗದಿದ್ದರೆ ನಿರ್ಬಂಧ ಹೇರುವ ಬೆದರಿಕೆಯನ್ನೂ ಅಮೆರಿಕ ಒಡ್ಡಿದೆ. ಪ್ರಧಾನಿ ಮೋದಿ ಯಾವ ರಾಷ್ಟ್ರದತ್ತ ಒಲವು ತೊರುತ್ತಾರೆ? ಎಂಬುದೀಗ ಕುತೂಹಲ.