ಬೋಲ್ಪುರ(ಪಶ್ಚಿಮ ಬಂಗಾಳ): ಅಮಿತ್ ಶಾ ಭೇಟಿಯ ನಂತರ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಬೋಲ್ಪುರದಲ್ಲಿ ರ‍್ಯಾಲಿ ನಡೆಸಿದ್ದಾರೆ. ಮೊನ್ನೆ ಶಾ ರ‍್ಯಾಲಿನಡೆಸಿದ ರೋಡ್ನಲ್ಲಿಯೇ ಇಂದು ಮಮತಾ ಮೆರವಣಿಗೆ ಕೈಗೊಂಡರು.
ಮತ್ತೆ ಬಿಜೆಪಿ ನಾಯಕರ ಮೇಲೆ ಕಿಡಿಕಾರಿದ ಮಮತಾ, ದೆಹಲಿಯಿಂದ ಬರುವ ಬಿಜೆಪಿ ನಾಯಕರು ಯಾವತ್ತಿಗೂ ಹೊರಗಿನವರೇ. ರವೀಂದ್ರನಾಥ ಟ್ಯಾಗೋರ್ ಮತ್ತು ವಿಶ್ವ ಭಾರತಿ ಅವರು ಶಾಂತಿನಿಕೇತನದಲ್ಲಿ ಜನಿಸಿದ್ದಾರೆಂದು ಹೇಳುವ ಮೂಲಕ, ಇಲ್ಲಿ ಬಂದು ವಿಶ್ವಕವಿಗಳಿಗೆ ಅವಮಾನಿಸಿದ್ದಾರೆ ಎಂದು ಸಿಎಂ ಆಕ್ರೋಶ ಹೊರ ಹಾಕಿದರು.
ಬಂಗಾಳದಾದ್ಯಂತ ಅಸಹ್ಯಕರ ರಾಜಕೀಯವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಣದ ಹೊಳೆಯನ್ನೆ ಹರಿಸುತ್ತಿದೆ. ಬಿಜೆಪಿ ಹಣ ಕೊಟ್ಟರೆ ತೆಗೆದುಕೊಳ್ಳಿ, ಆದರೆ, ಅವರಿಗೆ ಮತ ಚಲಾಯಿಸುವ ಅಗತ್ಯವಿಲ್ಲ, ಎಂದು ಜನರಿಗೆ ಮಮತಾ ಸಲಹೆ ನೀಡಿದ್ದಾರೆ.