ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಮಂಗಳಮುಖಿ ಮೋನಿಕಾ ದಾಸ್ ಎಂಬವರು ಪ್ರಧಾನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಮಂಗಳಮುಖಿಯೊಬ್ಬರನ್ನು ಮತದಾನದ ಕೆಲಸಕ್ಕೆ ಪ್ರಧಾನ ಅಧಿಕಾರಿಯಾಗಿ ನೇಮಿಸಲಾಗುತ್ತಿದೆ. ಮೋನಿಕಾ ಪಾಟ್ನಾ ಮೂಲದವರಾಗಿದ್ದು, ಬೂತ್ ಮಟ್ಟದ ಪ್ರಧಾನ ಆಫೀಸರ್ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಮೋನಿಕಾ ದಾಸ್ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದು, ದೇಶದ ಮೊದಲ ಮಂಗಳಮುಖಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಪ್ರಧಾನ ಅಧಿಕಾರಿಯಾಗಿ, ಮೋನಿಕಾ ಮೇಲ್ವಿಚಾರಣಾ ಕಾರ್ಯ ಮಾಡಲಿದ್ದಾರೆ.
ಇನ್ನು ಮೋನಿಕಾ ದಾಸ್ಗಿಂತ ಮೊದಲು ಶಿಕ್ಷಕರಾಗಿದ್ದ ರಿಯಾ ಸಿರ್ಕಾರ್ ಎಂಬ ಮಂಗಳಮುಖಿಯನ್ನು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಇನ್ನು ಚುನಾವಣಾ ಆಯೋಗವು ಬಿಹಾರ ಮತದಾನದ ದಿನಾಂಕವನ್ನು ಪ್ರಕಟಿಸಿದೆ. ಮೊದಲ ಹಂತವು ಅಕ್ಟೋಬರ್ 28ರಂದು ನಡೆಯಲಿದ್ದು, ಎರಡನೇ ಹಂತವು ನವೆಂಬರ್ 3ರಂದು ಮತ್ತು ಮೂರನೇ ಹಂತವು ನವೆಂಬರ್ 7ರಂದು ನಡೆಯಲಿದೆ. ನವೆಂಬರ್ 10ರಂದು ಮತಎಣಿಕೆ ನಡೆಯಲಿದೆ.