ನವದೆಹಲಿ: ಚೀನಾದೊಂದಿಗೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್‌ಗಳು ಈ ವಾರ ಸಭೆ ಸೇರಿ ಕೆಲ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಚೀನಾದೊಂದಿಗೆ ಗಡಿ ಬಿಕ್ಕಟ್ಟು ಸೃಷ್ಟಿಯಾಗಿರುವ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಪ್ರಸ್ತುತ ಸನ್ನಿವೇಶ ಹಾಗೂ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಬರಲಿರುವ ರಫೇಲ್ ಯುದ್ಧ ವಿಮಾನದ ಕ್ಷಿಪ್ರ ಕಾರ್ಯಾಚರಣಾ ಕೇಂದ್ರದ ಪರಿಸ್ಥಿತಿ ಕುರಿತು ವಾಯುಪಡೆಯ ಉನ್ನತ ಕಮಾಂಡರ್‌ಗಳು ಚರ್ಚೆ ನಡೆಸಲಿದ್ದಾರೆ.
ಜುಲೈ 22 ರಿಂದ ಪ್ರಾರಂಭವಾಗಲಿರುವ ವಾಯುಪಡೆಯ ಉನ್ನತ ಕಮಾಂಡರ್‌ಗಳ ಎರಡು ದಿನಗಳ ಸಮಾವೇಶದಲ್ಲಿ ದೇಶದ ಹಲವಾರು ಭದ್ರತಾ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಸೇನಾ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ನೇತೃತ್ವದ ನಡೆಯಲಿರುವ ಸಮ್ಮೇಳನದಲ್ಲಿ, ಭದೌರಿಯಾ ಅವರ ಏಳು ಮಂದಿ ಕಮಾಂಡರ್-ಇನ್-ಚೀಫ್ಗಳು ಭಾಗವಹಿಸಲಿದ್ದು, ಚೀನಾದೊಂದಿಗಿನ ಗಡಿಯಲ್ಲಿನ ಪರಿಸ್ಥಿತಿ ಮತ್ತು ಪೂರ್ವ ಲಡಾಖ್ ಹಾಗೂ ಉತ್ತರ ಗಡಿಯಲ್ಲಿ ಸೇನಾ ನಿಯೋಜನೆಗಳ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಯುಪಡೆಯು ತನ್ನ ಸಂಪೂರ್ಣ ಆಧುನಿಕ ಯುದ್ಧವಿಮಾನಗಳಾದ ಮಿರಾಜ್ 2000, ಸುಖೋಯ್ -30, ಮತ್ತು ಮಿಗ್ -29 ವಿಮಾನಗಳನ್ನು ಹಗಲು ಮತ್ತು ರಾತ್ರಿ ವೇಳೆಯು ಸಮರ್ಥವಾಗು ಕಾರ್ಯನಿರ್ವಹಿಸುವಂತೆ ಗಡಿಯಲ್ಲಿ ಸಿದ್ಧವಾಗಿರಿಸಿದೆ. ಸುಧಾರಿತ ಅಪಾಚೆ ದಾಳಿ ಹೆಲಿಕಾಪ್ಟರ್ಅನ್ನು ಚೀನಾ ಗಡಿಯುದ್ದಕ್ಕೂ ಫಾರ್ವರ್ಡ್ ಬೇಸ್‌ಗಳಲ್ಲಿ ನಿಯೋಜಿಸಲಾಗಿದೆ.
ಫ್ರಾನ್ಸ್‌ನಿಂದ ಈ ತಿಂಗಳ ಅಂತ್ಯದ ವೇಳೆಗೆ ದೇಶಕ್ಕೆ ಬರುತ್ತಿರುವ ರಫೇಲ್ ಯುದ್ಧವಿಮಾನಗಳ ಕ್ಷಿಪ್ರ ನಿಯೋಜನೆ ಮತ್ತು ಕಾರ್ಯಾಚರಣೆಯ ಬಗ್ಗೆಯೂ ಈ ಚರ್ಚೆ ನಡೆಯಲಿದೆ. ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದವನ್ನು ಸಂಪನ್ನಗೊಳಿಸುವಲ್ಲಿ ವಾಯುಸೇನೆಯ ಮುಖ್ಯಸ್ಥರು ಮಹತ್ವದ ಪಾತ್ರ ವಹಿಸಿದ್ದು, ಇದರ ಅಡಿಯಲ್ಲಿ ಸುಮಾರು 60,000 ಕೋಟಿ ರೂ. ವೆಚ್ಚದ 36 ರಾಫೆಲ್ ಜೆಟ್‌ಗಳು ತುರ್ತು ಖರೀದಿಯಲ್ಲಿ ಭಾರತಕ್ಕೆ ಬರಲಿವೆ.