ಮನುಷ್ಯ ಬದುಕಬೇಕೆಂದರೆ ಆಹಾರಕ್ಕಿಂತ ನೀರು ಅತ್ಯಗತ್ಯ. ನೀರಿನ ಲಭ್ಯತೆ ಇಲ್ಲದಿದ್ದರೆ ಮನುಷ್ಯ ಹೆಚ್ಚು ಕಾಲ ಬದುಕಲಾರ. ಈ ಕಾರಣಕ್ಕಾಗಿಯೇ ಕುಡಿಯುವ ನೀರನ್ನು ಒದಗಿಸುವುದು ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಸಾರಿದೆ.
ಕುಡಿಯುವ ನೀರನ್ನು ಒದಗಿಸುವುದು ಸರ್ಕಾರಗಳ ಹೊಣೆಗಾರಿಕೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಘೋಷಿಸಿದ್ದಾರೆ. ಜಲ ಶಕ್ತಿ ಸಚಿವರಾಗಿರುವ ಅವರು, ಹೈದರಾಬಾದ್‌ಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಿಷನ್ ಭಗೀರಥ ಮಾದರಿಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಯೋಜನೆ ರೂಪಿಸುವುದಾಗಿ ತಿಳಿಸಿದ್ದರು. ಜಲ ಜೀವನ ಮಿಷನ್ ಅಡಿ 2024ರ ವೇಳೆಗೆ ದೇಶಾದ್ಯಂತ 14.60 ಕೋಟಿ ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದರು.
ಈ ಯೋಜನೆಯ ಅಂದಾಜು ವೆಚ್ಚ 3.60 ಲಕ್ಷ ಕೋಟಿ ರೂ. ಹಾಗೆ ನೋಡಿದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮುಂಗಡ ಪತ್ರ ಅಧಿವೇಶನದಲ್ಲಿ ಈ ಪ್ರಸ್ತಾವನೆ ಮಾಡಲಾಗಿತ್ತು. ಜಲ ಜೀವನ ಮಿಷನ್ ಯೋಜನೆಯನ್ನು ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ರೂಪಿಸಲಾಗುವುದು ಹಾಗೂ ರಾಜ್ಯ ಸರಕಾರಗಳೊಂದಿಗೆ ಕೈ ಜೋಡಿಸಿ ‘ನಳದಿಂದ ಜಲ’ ಯೋಜನೆಗೆ ಚಾಲನೆ ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಮೂರು ತಿಂಗಳ ಹಿಂದೆ ವರದಿಯಾಗಿತ್ತು. ಶೇಖಾವತ್ ಅವರು ಯೋಜನೆಯ ವೆಚ್ಚವನ್ನು ಬಹಿರಂಗಪಡಿಸಿದ ನಂತರ ರಾಜ್ಯ ಸರಕಾರಗಳು ಕೈ ಜೋಡಿಸಿದಾಗ ಮಾತ್ರ ಇದರ ಜಾರಿ ಸಾಧ್ಯ ಎಂಬುದು ಈಗ ಸ್ಪಷ್ಟವಾಗಿದೆ.
ಜಲ ಶಕ್ತಿ ಅಭಿಯಾನವನ್ನು 256 ಜಿಲ್ಲೆಗಳಾದ್ಯಂತ ಹಾಗೂ 1,592 ವಿಭಾಗಗಳಲ್ಲಿ ಜಾರಿಗೊಳಿಸಲು ಸ್ಥಳೀಯ ಸಂಘಟನೆಗಳಿಗೆ ನಿರ್ದೇಶನಗಳನ್ನು ನೀಡಿದ್ದ ಕೇಂದ್ರ ಸರಕಾರವು, ಕುಡಿಯುವ ನೀರಿನ ಅವಶ್ಯಕತೆಯನ್ನು ರಾಜ್ಯ ಸರಕಾರಗಳ ನೆರವಿನಿಂದ ಈಡೇರಿಸುವುದಾಗಿ ಈಗ ಭರವಸೆ ನೀಡಿದೆ. ರಾಜ್ಯಗಳು ತಮ್ಮ ಅನಗತ್ಯ ವೆಚ್ಚಗಳನ್ನು ತಗ್ಗಿಸುವ ಮೂಲಕ ಆ ಹಣವನ್ನು ಇಂತಹ ಜೀವನಾಧಾರ ಯೋಜನೆಗಳಿಗೆ ವಿನಿಯೋಗಿಸಿದರೆ ಕೋಟ್ಯಂತರ ಜನರ ದಾಹವನ್ನು ತಣಿಸಲು ಸಾಧ್ಯವಾಗಲಿದೆ.
ನೀರಿಗಾಗಿ ಮೈಲುಗಟ್ಟಲೇ ನಡೆಯಬೇಕಾದವರ ಕಷ್ಟವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನೀರು ತರಲೆಂದು ಜಗತ್ತಿನಾದ್ಯಂತ ಮಹಿಳೆಯರು ಮತ್ತು ಮಕ್ಕಳು ದಿನಕ್ಕೆ 20 ಕೋಟಿ ಗಂಟೆಗಳನ್ನು ಕಳೆಯುತ್ತಿದ್ದು, ಇದು 22,800 ವರ್ಷಗಳಿಗೆ ಸಮ ಎಂದು ಯುನಿಸೆಫ್ ಅಂದಾಜಿಸಿದೆ. ಲೋಕಸಭೆಯಲ್ಲಿ ಕೇಂದ್ರ ಸರಕಾರ ನೀಡಿದ ಅಂಕಿ ಅಂಶಗಳ ಪ್ರಕಾರ, 21 ರಾಜ್ಯಗಳ 153 ಜಿಲ್ಲೆಗಳ ಜನರು ವಿಷಕಾರಿ ಅರ್ಸೆನಿಕ್ ಅಧಿಕವಾಗಿರುವ ನೀರನ್ನು ಕುಡಿಯುತ್ತಿದ್ದಾರೆ. ಡ್ಯೂಕ್ ವಿಶ್ವವಿದ್ಯಾಲಯ ಕಳೆದ ವರ್ಷ ನಡೆಸಿದ ಅಧ್ಯಯನದ ಪ್ರಕಾರ, 15 ಕ್ಕೂ ಹೆಚ್ಚು ರಾಜ್ಯಗಳ ಅಂತರ್ಜಲವು ವಿಕಿರಣಶೀಲ ಯುರೇನಿಯಂನಿಂದ ಮಾಲಿನ್ಯಗೊಂಡಿದೆ. ನೀತಿ ಆಯೋಗದ ಅಂಕಿಅಂಶಗಳು, ದೇಶಾದ್ಯಂತ 60 ಕೋಟಿ ಜನ ನೀರಿನ ಕೊರತೆಯಿಂದ ತೊಂದರೆಪಡುತ್ತಿದ್ದಾರೆ ಎಂದು ತೋರಿಸಿವೆ. ನಗರಗಳು ಮತ್ತು ಹಳ್ಳಿಗಳನ್ನು ಆವರಿಸಿರುವ ಜಲಸಂಕಷ್ಟವು ನಮಗೆ ಕೇಪ್ ಟೌನ್ ದೃಶ್ಯಗಳನ್ನು ನೆನಪಿಸುತ್ತದೆ.
ಸೌಲಭ್ಯಗಳಲ್ಲಿಯೇ ಮೂಲಭೂತವೆನಿಸಿರುವ ನೀರನ್ನು ಒದಗಿಸುವಲ್ಲಿ ಸರಕಾರವು ಹೀನಾಯವಾಗಿ ವಿಫಲವಾಗಿರುವುದು ಇದರಿಂದ ಸ್ಪಷ್ಟ. ಕೈಗಾರಿಕೆಗಳ ಹಾಗೂ ಕೃಷಿ ತ್ಯಾಜ್ಯಗಳಿಂದ ಪವಿತ್ರ ಗಂಗಾ ನದಿಯ ಜೊತೆಗೆ ಹಲವಾರು ಇತರ ನದಿಗಳು ಮಲಿನವಾಗುತ್ತಲೇ ಇವೆ. ಒಂದು ವೇಳೆ ಜಲ ಸಂರಕ್ಷಣೆಯನ್ನು ನಿರ್ಲಕ್ಷಿಸಿದರೆ, ಅಂತರ್ಜಲವು ಶೂನ್ಯ ಮಟ್ಟ ತಲುಪುತ್ತದೆ ಹಾಗೂ ಜಲಾಶಯಗಳು ನೋಡನೋಡುತ್ತಲೇ ಖಾಲಿಯಾಗುತ್ತವೆ.
ಈ ಎಚ್ಚರಿಕೆಗಳ ಹಿನ್ನೆಲೆಯಲ್ಲಿ, ತೀವ್ರ ಜಡತೆಯಿಂದ ನಾವು ಏಳಲೇಬೇಕಿದೆ. ಹಿಂದಿನ ಯೋಜನಾ ಆಯೋಗದಲ್ಲಿ ಕೆಲಸ ಮಾಡಿದ್ದ ಮಿಹಿರ್ ಶಾ ಅವರ ನೇತೃತ್ವದಲ್ಲಿ ಇನ್ನು ಆರು ತಿಂಗಳಲ್ಲಿ ಹೊಸ ರಾಷ್ಟ್ರೀಯ ಜಲ ನೀತಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಈಗ ಹೇಳಲಾಗುತ್ತಿದೆ. ವಿವಿಧ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು ಜವಾಬ್ದಾರಿಯುತ ಜಲ ಸಂರಕ್ಷಣಾ ನಿಲುವಿಗೆ ದಾರಿ ಮಾಡಿಕೊಡುವ ವಿಧೇಯಕವನ್ನು ಶಾ ಸಮಿತಿಯು ರೂಪಿಸಬೇಕಿದೆ.
ನೀರಿನ ಬಳಕೆಯನ್ನು ತಗ್ಗಿಸುವ ಹಾಗೂ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯದಂತೆ ತಡೆಗಟ್ಟಲು ಆಸ್ಟ್ರೇಲಿಯಾ, ಇಂಗ್ಲಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜಲ ಸಂಕಷ್ಟವನ್ನು ತಡೆಯುವುದೇ ಅವುಗಳ ಉದ್ದೇಶ. 2020 ರ ವೇಳೆಗೆ ದೇಶದ ಎಲ್ಲಾ ನದಿ ದಂಡೆಗಳು ಮತ್ತು ನಗರಗಳಲ್ಲಿ ನೀರಿನ ಗುಣಮಟ್ಟವನ್ನು ಶೇಕಡಾ ೯೫ರಷ್ಟು ಹೆಚ್ಚಿಸುವ ಗುರಿ ಹೊಂದಿರುವ ಚೀನಾ, ಜಲಸಂರಕ್ಷಣೆ ಹಾಗೂ ಜಲ ಮಾಲಿನ್ಯ ಪ್ರಕರಣಗಳ ಮೇಲೆ ನಿಗಾ ವಹಿಸಲೆಂದೇ 12 ಲಕ್ಷ ಜನರನ್ನು ನಿಯೋಜಿಸಿದೆ. ಇಂತಹ ತಂತ್ರಗಳನ್ನು ಊಹಿಸಲೂ ಸಾಧ್ಯವಿಲ್ಲದ ಭಾರತ, ತನ್ನ 70 ವರ್ಷಗಳ ಸ್ವಾತಂತ್ರ್ಯದ ಅವಧಿಯಲ್ಲಿ ಬಹುತೇಕ ಜಲಮೂಲಗಳನ್ನು ಕಳೆದುಕೊಂಡಿದೆ.
ಈ ಪರಿಸ್ಥಿತಿಯನ್ನು ದಾಟಿ ಹೋಗಬೇಕೆಂದರೆ, ಹೊಸ ಜಲ ಸಂರಕ್ಷಣಾ ಸಂಸ್ಕೃತಿಯನ್ನು ಜಾರಿಗೆ ತರಲೇಬೇಕು. ಜಲ ಸಂರಕ್ಷಣೆಯು ಜೀವನದ ಮೂಲಾಧಾರ ಎಂಬ ಜಾಗೃತಿಯನ್ನು ರೈತರಿಂದ ಹಿಡಿದು ಜನಸಾಮಾನ್ಯರವರೆಗೆ ಮೂಡಿಸಬೇಕಿದೆ. ಶಾಲಾ ಪಠ್ಯಕ್ರಮದಲ್ಲಿ ಈ ವಿಷಯವನ್ನು ಒಂದು ಭಾಗವಾಗಿಸುವ ಮೂಲಕ ಎಳೆಯ ಮನಸ್ಸುಗಳಿಗೆ ಸಣ್ಣ ವಯಸ್ಸಿನಿಂದಲೇ ಜಲ ಸಂರಕ್ಷಣೆಯ ಶಿಕ್ಷಣ ನೀಡಬೇಕಿದೆ.
ಹಿಂದಿನ ಜಲ ನೀತಿಗಳು ಉದಾತ್ತ ಯೋಜನೆಗಳನ್ನು ಹೊಂದಿದ್ದರೂ, ಜಲ ಸಂರಕ್ಷಣೆಯಲ್ಲಿ ಅವು ಯಾವವೂ ಯಾವುದೇ ಉಪಯೋಗಕ್ಕೆ ಬರಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯು ವ್ಯಾಪಕ ಭ್ರಷ್ಟಾಚಾರದಲ್ಲಿ ಸಿಲುಕಿದ್ದು, ಖಚಿತವಾಗಿರುವ ಜಲ ಸಂಕಷ್ಟವನ್ನು ತಪ್ಪಿಸಲು ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಮಳೆ ನೀರು ಸಂಗ್ರಹ, ನೀರಿನ ಪರಿಣಾಮಕಾರಿ ಬಳಕೆ ಮತ್ತು ಚರಂಡಿ ನೀರಿನ ಪುನರ್‌ಬಳಕೆಯಂತಹ ಯೋಜನೆಗಳು ಸಮಾಜದ ಎಲ್ಲಾ ವರ್ಗಗಳ ಜನರಿಂದ ಜಾರಿಗೊಳ್ಳಬೇಕಿರುವುದೂ ಅಷ್ಟೇ ಮಹತ್ವದ್ದಾಗಿವೆ. ಭಾರತದ ನೀರಿನ ಕೊಳಾಯಿಗಳಲ್ಲಿ ಮತ್ತು ನಲ್ಲಿಗಳಲ್ಲಿ ಸಂಗ್ರಹವಾಗಿರುವ ಅಪಾಯಕಾರಿ ಇ-ಕೋಲಿ ಬ್ಯಾಕ್ಟೀರಿಯಾದಿಂದ ಕುಡಿಯುವ ನೀರು ಮಾನವ ಬಳಕೆಗೆ ಅಯೋಗ್ಯವಾಗಿದೆ. ಇಂತಹ ಗಂಭೀರ ಪ್ರಸಂಗಗಳನ್ನು ಇಲ್ಲವಾಗಿಸಿದರೆ ಹಾಗೂ ಪುನರಾವರ್ತನೆಯಾಗದಂತೆ ತಡೆಗಟ್ಟಿದರೆ ಮಾತ್ರ, ಭವಿಷ್ಯದ ತಲೆಮಾರುಗಳಿಗೆ ಜವಾಬ್ದಾರಿಯುತ ಎಂದು ನಮ್ಮನ್ನು ಪರಿಗಣಿಸಬಹುದು.