ಮೊರೆನಾ (ಮಧ್ಯಪ್ರದೇಶ): ನಾಲ್ಕು ದಿನಗಳ ನವಜಾತ ಶಿಶುವೊಂದನ್ನು ಪೋಷಕರೇ ಸೇರಿಕೊಂಡು ಕತ್ತು ಹಿಸುಕಿ ಕೊಲೆಗೈದ ಘಟನೆ ಮಧ್ಯಪ್ರದೇಶದ ಮೊರೆನಾ ಆಸ್ಪತ್ರೆಯೊಂದರಲ್ಲಿ ನಡೆದಿದೆ. ನವಜಾತ ಶಿಶುವಿನ ತಂದೆ-ತಾಯಿ ಹಾಗೂ ಅಜ್ಜಿ ಕತ್ತು ಹಿಸುಕಿ ಕೊಲೆಗೈದ ಪಾಪಿಗಳೆಂದು ತಿಳಿದು ಬಂದಿದೆ.
ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕದಲ್ಲಿ ಚಿಕಿತ್ಸೆಗಾಗಿ ಈ ನಾಲ್ಕು ದಿನಗಳ ಹೆಣ್ಣು ಮಗುವನ್ನು ಇರಿಸಲಾಗಿತ್ತು. ಮಗುವಿಗೆ ಹಾಲು ಕೊಡಲು ಸೂಚಿಸಿದ್ದ ವೈದ್ಯರು ಅದರಂತೆ ತಾಯಿಯ ಕೈಗೆ ನೀಡಿದ್ದರು. ಆದರೆ, ತಾಯಿ ಇದ್ದಕ್ಕಿಂತೆ ಮಗುವನ್ನು ತೆಗೆದುಕೊಂಡು ಆಸ್ಪತ್ರೆಯ ಕೊಠಡಿಯಿಂದ ಹೊರಹೋಗಿದ್ದಳು. ಅನುಮಾನ ಬಂದು ಆಸ್ಪತ್ರೆಯ ಸಿಬ್ಬಂದಿ ತಾಯಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸತ್ತ ಮಗುವಿನೊಂದಿಗೆ ಮರಳಿ ಬಂದ ತಾಯಿಯ ವರ್ತನೆ ಬಗ್ಗೆ ಸಂಶಯ ವ್ಯಕ್ತವಾಗಿದ್ದರಿಂದ ವೈದ್ಯರು ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವೇಳೆ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಶಿಶುವಿನ ತಂದೆ-ತಾಯಿ ಹಾಗೂ ಅಜ್ಜಿಯನ್ನು ಬಂಧಿಸಿದ್ದಾರೆ.