ನವದೆಹಲಿ: ಭಾರತದಲ್ಲಿ ಮೂರು ಕೋವಿಡ್ ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡನಾಡಿದ ಪಿಎಂ ಮೋದಿ, ದೇಶದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿ ಕುರಿತು ಮಾತನಾಡಿದರು. ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಲು ಮತ್ತು ರಕ್ಷಣಾ ಸಲಕರಣೆಗಳ ಉತ್ಪಾದನೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಆರಂಭಿಕ ದಿನಗಳಲ್ಲಿ ದೇಶದಲ್ಲಿ ಒಂದೇ ಒಂದು ಟೆಸ್ಟಿಂಗ್ ಲ್ಯಾಬ್ ಇತ್ತು. ಇದೀಗ ಪ್ರಯೋಗಾಲಯಗಳ ಸಂಖ್ಯೆ 1,400ಕ್ಕೆ ಏರಿಕೆಯಾಗಿದೆ. ಕೆಲ ತಿಂಗಳ ಹಿಂದೆ ನಾವು ಎನ್-95 ಮಾಸ್ಕ್ಗಳೂ, ಪಿಪಿಇ ಕಿಟ್ಗಳನ್ನ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ನಮ್ಮ ಅಗತ್ಯತೆಗಳನ್ನು ನಾವೇ ಪೂರೈಸಿಕೊಳ್ಳುತ್ತಿರುವುದಲ್ಲದೇ ಇತರ ದೇಶಗಳಿಗೂ ನೆರವಾಗುತ್ತಿದ್ದೇವೆ ಎಂದರು.
ವಿಜ್ಞಾನಿಗಳು ಲಸಿಕೆ ಉತ್ಪಾದಿಸಲು ಕಠಿಣ ಶ್ರಮ ಪಡುತ್ತಿದ್ದಾರೆ. ಇಂದು ದೇಶದಲ್ಲಿ ಒಂದಲ್ಲ ಎರಡಲ್ಲ ಮೂರು ಕೋವಿಡ್ ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲು ತಯಾರಿ ನಡೆಸುತ್ತೇವೆ ಎಂದರು.
ಕೊರೊನಾ ಬಿಕ್ಕಟ್ಟಿನ ನಡುವೆ 130 ಕೋಟಿ ಭಾರತೀಯರು ಸ್ವಾವಲಂಬಿಗಳಾಗಬೇಕೆಂಬ ಸಂಕಲ್ಪವನ್ನು ತೆಗೆದುಕೊಂಡಿದ್ದಾರೆ. 'ಆತ್ಮ ನಿರ್ಭರ ಭಾರತ' ಭಾರತೀಯರ ಮನಸ್ಸಿನಲ್ಲಿದೆ. ಈ ಕನಸು ಪ್ರತಿಜ್ಞೆಯಾಗಿ ಬದಲಾಗುತ್ತಿದೆ. 130 ಕೋಟಿ ಭಾರತೀಯರಿಗೆ ಇದು ಮಂತ್ರವಾಗಿ ಮಾರ್ಪಟ್ಟಿದೆ ಎಂದು ಮೋದಿ ಹೇಳಿದರು.