ಬಹ್ರೇಚ್: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಾರಿಗೆ ತಂದಿರುವ 21 ದಿನಗಳ ಲಾಕ್ಡೌನ್ನಿಂದಾಗಿ ಇಡೀ ಭಾರತವೇ ಸ್ತಬ್ಧಗೊಂಡಿದೆ. ಯಾರೂ ಎಲ್ಲೂ ಹೋಗದ ಪರಿಸ್ಥಿತಿ ಇದೆ. ಈ ನಡುವೆ ಭಾರತದಿಂದ ನೇಪಾಳಕ್ಕೆ ಹೊರಟ 180ಕ್ಕೂ ಹೆಚ್ಚು ಕಾರ್ಮಿಕರು, ಎರಡು ದೇಶಗಳ ನಡುವಿನ ಗಡಿಭಾಗ ಬಹ್ರೇಚ್ನಲ್ಲಿ ಸಿಲುಕಿಕೊಂಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎರಡು ದಿನಗಳ ಹಿಂದೆ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ನೌಕರರು, ಬಹ್ರೇಚ್ನ ರೂಪೆಡಿಹಾ ಚೆಕ್ಪೋಸ್ಟ್ ಮೂಲಕ ನೇಪಾಳ ಪ್ರವೇಶಿಸಲು ಮುಂದಾಗಿದ್ದರು.
ಅವರನ್ನು ಚೆಕ್‌ಪೋಸ್ಟ್‌ನಲ್ಲೇ ತಡೆದ ಅಲ್ಲಿನ ಅಧಿಕಾರಿಗಳು ಹೆಸರು ಮತ್ತು ವಿಳಾಸದ ಮಾಹಿತಿ ಪಡೆದುಕೊಂಡರು. ಮನೆಗಳಿಗೆ ಬಿಟ್ಟು ಬರುವುದಾಗಿ ಹೇಳಿದ ಅಧಿಕಾರಿಗಳು, ಗೊತ್ತಿಲ್ಲದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಕಾರ್ಮಿಕರು ಭಾರತ ಮತ್ತು ನೇಪಾಳ ಗಡಿಭಾಗದ ಪ್ರದೇಶದಲ್ಲೇ ಉಳಿದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಮತ್ತು ಎಸ್ಎಸ್ಬಿ ಕಮಾಂಡೆಂಟ್, ಸ್ಥಳೀಯ ಪೊಲೀಸರು ಮತ್ತು ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಕಾರ್ಮಿಕರು ಎರಡು ದಿನಗಳಿಂದ ಗಡಿಭಾಗದಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಕಾರ್ಮಿಕರು ಅಸಹಾಯಕರಾಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.