ಮಥುರಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರು ಮಾನಸಿಕ ಅಸ್ವಸ್ಥರು. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯ್ದೆಯು ಪೌರತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಲ್ಲ. ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಇಂತಹ ಕಾಯ್ದೆಯನ್ನು ವಿರೋಧಿಸುವವರು ಮಾನಸಿಕ ಅಸ್ವಸ್ಥರು. ಅವರು ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಶ್ಯಕತೆಯಿದೆ ಎಂದಿದ್ದಾರೆ.
ಡಿ. 11ರಂದು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ಬಳಿಕ ದೇಶದೆಲ್ಲೆಡೆ ಇದರ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 20 ಜನರು ಮೃತಪಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿ. 31ರೊಳಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ (ಹಿಂದೂ, ಕ್ರೈಸ್ತ, ಬೌದ್ಧ ಹಾಗೂ ಪಾರ್ಸಿ) ಭಾರತದ ಪೌರತ್ವ ನೀಡುವ ಕಾಯ್ದೆಯಾಗಿದೆ.