ತೂತುಕುಡಿ: ತೂತುಕುಡಿಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಯೋಜನೆಯಡಿ ಕೋವಿಡ್-19 ಕೇಂದ್ರಗಳಿಂದ ಸಂಗ್ರಹಿಸಿದ ಖಾಲಿ ನೀರಿನ ಬಾಟಲಿಗಳನ್ನು ಬಳಸಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ನಿರ್ಮಾಣ ವೆಚ್ಚವು ಇಟ್ಟಿಗೆಗಳಿಂದ ನಿರ್ಮಿಸುವ ವೆಚ್ಚಕ್ಕಿಂತ ಕಡಿಮೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ನಿಗಮ, ಪುರಸಭೆ, ಹಳ್ಳಿಗಳ ಆಯಾ ಕಸ ಸಂಗ್ರಹಣಾ ಡಿಪೋಗಳಲ್ಲಿ ತ್ಯಾಜ್ಯ ಎಸೆಯುವುದರಿಂದ, ಅವುಗಳ ಮೂಲಕ ರೋಗಗಳು ಹರಡುವ ಅಪಾಯವಿದೆ ಮತ್ತು ದುರ್ವಾಸನೆಯೂ ಇದೆ. ಸಂಗ್ರಹವಾಗಿರುವ ಟನ್‌ಗಟ್ಟಲೆ ತ್ಯಾಜ್ಯಗಳಿಂದ ಹಸಿರು ಮೇವು ಉತ್ಪಾದಿಸಲು ಮತ್ತು ಮರು ಬಳಕೆ ಉದ್ದೇಶಗಳಿಗಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮ ಜಾರಿಗೆ ತರಲು ತಮಿಳುನಾಡು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಘನತ್ಯಾಜ್ಯ ನಿರ್ವಹಣೆಯಂತಹ ಸಮುದಾಯ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಇದರ ಭಾಗವಾಗಿ, ತೂತುಕುಡಿ ಕಾರ್ಪೊರೇಷನ್ ಶೌಚಾಲಯಗಳನ್ನು ನಿರ್ಮಿಸುತ್ತಿದ್ದು, ತಮಿಳುನಾಡಿನಲ್ಲಿ ಮೊದಲ ಬಾರಿಗೆ ಬಳಸಿ ಎಸೆಯಲಾದ ಖಾಲಿ ನೀರಿನ ಬಾಟಲಿಗಳಿಂದ ಶೌಚಾಲಯ ನಿರ್ಮಿಸಿದೆ. ನಿಗಮ ಒಡೆತನದ ಘನತ್ಯಾಜ್ಯ ನಿರ್ವಹಣಾ ಕೇಂದ್ರವು ತೂತುಕುಡಿ ಕಾರ್ಪೊರೇಷನ್‌ನ ಅಧೀನದಲ್ಲಿರುವ ಪೆರುಮಾಲ್‌ಪುರಂ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ಸಂಗ್ರಹವಾಗಿರುವ ಕಸದಲ್ಲಿರುವ ತರಕಾರಿ ತ್ಯಾಜ್ಯ ಮತ್ತು ನೀರಿನ ಬಾಟಲಿಗಳನ್ನು ಮರುಬಳಕೆ ಮಾಡಲು ಇಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ವಿಲೇವಾರಿ ಮಾಡಿದ ನೀರಿನ ಬಾಟಲಿಗಳನ್ನು ಆರೋಗ್ಯ ಕಾರ್ಯಕರ್ತರು ಸಂಗ್ರಹಿಸಿ ಪೆರುಮಾಲ್ಪುರಂ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ತರುತ್ತಾರೆ. ಪ್ರಾಯೋಗಿಕ ಆಧಾರದ ಮೇಲೆ ಪ್ಲಾಸ್ಟಿಕ್ ಬಾಟಲಿಗಳ ಶೌಚಾಲಯ ನಿರ್ಮಿಸಲು ನಿಗಮದ ಆಯುಕ್ತ ಜಯಸೀಲನ್ ನಿರ್ಧರಿಸಿದ್ದಾರೆ. ಈ ಯೋಜನೆಯನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಅನುಮೋದನೆಗಾಗಿ ಅವರು ಕಳುಹಿಸಿದ್ದಾರೆ.
ಇಟ್ಟಿಗೆಗಳ ಬದಲು ಬಾಟಲಿಗಳನ್ನು ಬಳಸಿ ಘನತ್ಯಾಜ್ಯ ಸಂಕೀರ್ಣದ ಒಳಗೆ ಶೌಚಾಲಯಗಳ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಖಾಲಿ ಬಾಟಲಿಗಳನ್ನು ಸಮುದ್ರದ ಮರಳಿನಿಂದ ತುಂಬಿಸಿ ಮತ್ತು ಆ ಬಾಟಲಿಗಳ ಮುಚ್ಚಳಗಳನ್ನು ಗಂಮ್ನಿಂದ ಮುಚ್ಚಲಾಗುತ್ತದೆ. ಇಟ್ಟಿಗೆಗಳ ಬದಲು ಸಿಮೆಂಟ್ ಮಿಶ್ರಣದ ಮಧ್ಯೆ ಮರಳು ತುಂಬಿದ ಬಾಟಲಿಗಳನ್ನು ಬಳಸಿ ಗೋಡೆ ನಿರ್ಮಿಸಲಾಗಿದೆ. ಈ ಶೌಚಾಲಯದ ನಿರ್ಮಾಣ ಕಾರ್ಯವು ಮುಂದಿನ ಎರಡು ವಾರಗಳಲ್ಲಿ ಪೂರ್ಣಗೊಳ್ಳಲಿದ್ದು, ಕಾರ್ಯರೂಪಕ್ಕೆ ಬರಲಿದೆ ಎಂದು ನಿಗಮದ ಆರೋಗ್ಯ ಅಧಿಕಾರಿ ಅರುಣ್ ಹೇಳಿದ್ದಾರೆ.