ತೂತುಕುಡಿ (ತಮಿಳುನಾಡು): ತಮಿಳುನಾಡಿನ ಸತಾನ್‌ಕುಲಂನಲ್ಲಿ ಅಪ್ಪ-ಮಗ ಲಾಕಪ್ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರುರಾಣಿ ಜೈಲಿನಲ್ಲಿರುವ ಪೊಲೀಸ್ ಅಧಿಕಾರಿಗಳಾದ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್ ಬಾಲಕೃಷ್ಣನ್ ಮತ್ತು ಕಾನ್‌ಸ್ಟೆಬಲ್ ಮುರುಗನ್ ಅವರನ್ನು 15 ದಿನಗಳ ಮಟ್ಟಿಗೆ ಪೊಲೀಸ್ ರಿಮಾಂಡ್ಗೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಈ ಮೂವರು ಪೊಲೀಸ್ ಅಧಿಕಾರಿಗಳನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಜಯರಾಜ್ ಮತ್ತು ಬೆನಿಕ್ಸ್ ಅವರ ಕಸ್ಟಡಿ ಹತ್ಯೆ ಸಂಬಂಧ ಸಿಬಿ-ಸಿಐಡಿ ಗುರುವಾರ ಬೆಳಗ್ಗೆ ಇನ್ಸ್‌ಪೆಕ್ಟರ್ ಶ್ರೀಧರ್ ಅವರನ್ನು ಬಂಧಿಸಿತ್ತು.
ಕಸ್ಟಡಿಯಲ್ಲಿ ತಂದೆ-ಮಗನನ್ನು ಹಿಂಸಿಸಿದ ಪರಿಣಾಮವಾಗಿ ಸಾವನ್ನಪ್ಪಿದರು ಎಂದು ಇನ್ಸ್ಪೆಕ್ಟರ್ಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು ಐವರು ಪೊಲೀಸರನ್ನು ಈವರೆಗೆ ಬಂಧಿಸಲಾಗಿದೆ.
ಸಿಬಿ-ಸಿಐಡಿ ಸಬ್ ಇನ್ಸ್‌ಪೆಕ್ಟರ್ ಬಾಲಕೃಷ್ಣನ್ ಮತ್ತು ಕಾನ್‌ಸ್ಟೆಬಲ್‌ಗಳಾದ ಮುತ್ತುರಾಜ್ ಮತ್ತು ಮುರುಗನ್ ಎಂಬ ಮೂವರು ಪೊಲೀಸರನ್ನು ಬಂಧಿಸಿದೆ. ಅಮಾನತುಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ರಗು ಗಣೇಶ್ ಅವರನ್ನು ಬುಧವಾರ ಬಂಧಿಸಲಾಗಿತ್ತು.
ಕರ್ಫ್ಯೂ ವೇಳೆಯಲ್ಲಿ ಅಂಗಡಿ ತೆರೆದಿದ್ದರು ಎಂಬ ಆರೋಪದಲ್ಲಿ ಪಿ. ಜಯರಾಜ್ (59) ಮತ್ತು ಅವರ ಪುತ್ರ ಜೆ ಬೆನಿಕ್ಸ್ (31) ಅವರನ್ನು ಜೂನ್ 19 ರಂದು ವಶಕ್ಕೆ ಪಡೆದ ಪೊಲೀಸರು, ಕೋವಿಲ್ಪಟ್ಟಿ ಸಬ್ ಜೈಲಿನಲ್ಲಿ ಇಟ್ಟಿದ್ದರು. ಈ ವೇಳೆ, ಪೊಲೀಸರು ಇಬ್ಬರಿಗೂ ಚಿತ್ರ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅಪ್ಪ ಮಗನನ್ನು ಜೂನ್ 22ರಂದು ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಗ ಬೆನಿಕ್ಸ್ ಮೃತಪಟ್ಟಿದ್ದರು. ಮರು ದಿನ ಜೂನ್ 23ರಂದು ಅಪ್ಪ ಜಯರಾಜ್ ಕೂಡ ಕೊನೆಯುಸಿರೆಳೆದಿದ್ದರು.