ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಚಾಪರ್ ಡೀಲ್ ಸಂಬಂಧ ಬಿಜೆಪಿ ಬುಧವಾರ ಕಾಂಗ್ರೆಸ್ ವಿರುದ್ಧದ ತನ್ನ ದಾಳಿ ಮುಂದುವರೆಸಿದೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಆರೋಪಿತರಾದ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಕುರಿತು ಉಲ್ಲೇಖಗಳನ್ನು ನೀಡಿದ್ದಾರೆ ಎಂಬ ವರದಿಗಳ ಬಗ್ಗೆ ಆ ಪಕ್ಷದ ನಾಯಕ ರಾಹುಲ್ ಗಾಂಧಿ ಮೌನವಾಗಿದ್ದಾರೆ. ರಕ್ಷಣಾ ಒಪ್ಪಂದಗಳಲ್ಲಿ ಕಾಂಗ್ರೆಸ್ ಅಕ್ರಮವೆಸಗಿದೆ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರೋಪಿಸಿದರು.
ಅವರು ಮೌನವಾಗಿ ಮಾತ್ರ ಇದ್ದಾರೆ. ಈ ಮೌನದಿಂದ ನಾವು ಏನು ಅರ್ಥಮಾಡಿಕೊಂಡಿದ್ದೇವೆ. ಪ್ರತಿ ವಿಷಯದ ಬಗ್ಗೆ ಟ್ವೀಟ್ ಮಾಡುವ ವ್ಯಕ್ತಿ, ಇಟಲಿ ಮತ್ತು ಭಾರತದಲ್ಲಿ ತನಿಖೆ ನಡೆಯುತ್ತಿರುವ ಇಂತಹ ಹಗರಣದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಇದಕ್ಕೆಲ್ಲ ಕಾರಣ ಏನು? ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇಟಲಿಯಲ್ಲಿ 3,600 ಕೋಟಿ ರೂ. ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದ ಬಗ್ಗೆ ತನಿಖೆ ನಡೆದಿದೆ. ಅದರ ಮೂಲ ಕಂಪನಿಯು ಅನೈತಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
2012ರ ನವೆಂಬರ್ 26ರಂದು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ಲೋಕಸಭೆಗೆ ಮಾಹಿತಿ ನೀಡಿದ್ದು, ಇಟಲಿಯಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಭಾರತದೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಿಸಿದ ತನಿಖೆಯೂ ಸೇರಿದೆ ಎಂದಿದ್ದಾರೆ. 2013ರ ಫೆಬ್ರವರಿಯಲ್ಲಿ ಸಿಬಿಐ ಪ್ರಾಥಮಿಕ ತನಿಖೆಗೆ ಆದೇಶಿಸಿದೆ ಎಂದು ರಾಥೋಡ್ ಹೇಳಿದ್ದಾರೆ.
2013ರ ಮಾರ್ಚ್ 25ರಂದು ಎ.ಕೆ.ಆಂಟನಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಒಪ್ಪಂದದಲ್ಲಿ ಲಂಚ ತೆಗೆದುಕೊಳ್ಳಲಾಗಿದೆ ಎಂದು ಒಪ್ಪಿಕೊಂಡಿದ್ದರು. ನಾನು ಅವರ ಹೇಳಿಕೆಯನ್ನು ಉಲ್ಲೇಖಿಸುತ್ತೇನೆ. ಹೌದು, ಹೆಲಿಕಾಪ್ಟರ್ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಲಂಚ ತೆಗೆದುಕೊಳ್ಳಲಾಗಿದೆ. ಸಿಬಿಐ ಈ ಪ್ರಕರಣದ ತನಿಖೆಯನ್ನು ತೀವ್ರವಾಗಿ ಮುಂದುವರೆಸುತ್ತಿದೆ ಎಂದರು.