ಛತ್ತೀಸ್ಗಢ: ಸಾಧು - ಸಂತರು, ರಾಜ-ರಾಣಿಯರು, ರಾಷ್ಟ್ರ ನಾಯಕರ ಸಮಾಧಿಗಳಿವೆ. ಇವುಗಳನ್ನೇ ಪೂಜಿಸೋರೂ ಇದ್ದಾರೆ. ಆದರೆ, ಗಿಳಿಗೂ ಒಂದು ಸಮಾಧಿ ಕಟ್ಟಿ, ಅದನ್ನ ಪೂಜಿಸ್ತಿದ್ದಾರೆ. ಛತ್ತೀಸ್ಗಢದ ಅಂಬಿಕಾಪುರದಲ್ಲಿರೋ ಗಿಳಿ ಸಮಾಧಿ ಟಕಿಯಾ ಶರೀಫ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
ಇಲ್ಲಿ ಬಾಬಾ ಮೊಹಬ್ಬತ್ ಷಾ ಅವರ ದರ್ಗಾವಿದೆ. ಅದರ ಪಕ್ಕದಲ್ಲಿ ಗಿಳಿ ಸಮಾಧಿಯಿದೆ. ಇಲ್ಲಿಗೆ ಬರುವ ಭಕ್ತರು ಬಾಬಾ ಮತ್ತು ಅವರ ಗಿಳಿಯನ್ನೂ ಸಮಾನ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷವೂ ಇಲ್ಲಿ ನಡೆಯೋ ಉರುಸಿನಲ್ಲಿ ಸರ್ವಧರ್ಮೀಯರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸುತ್ತಾರೆ. ಇದು ಭಾವೈಕ್ಯ ತಾಣವಾಗಿ ಮಾರ್ಪಟ್ಟಿದೆ.
ಇದು ಪುರಾತನ ದೇವಾಲಯ. ಮೂಲ ದೇಗುಲವಿದ್ದ ಸ್ಥಳದಲ್ಲೇ ನೂತನ ದೇಗುಲ ನಿರ್ಮಾಣಕ್ಕೆ ನೂರಾರು ಅಡಿ ಅಗೆದರೂ ಬೂದಿ ಹೊರ ಹೊಮ್ಮುತ್ತಲೇ ಇತ್ತಂತೆ. ಅದೇ ಬೂದಿಯ ರಾಶಿಗೆ ಅಡಿಪಾಯ ಹಾಕಲಾಗಿದೆ. ದಪ್ಪನಾದ ಬೂದಿಯ ಮೇಲೆ ಸ್ಥಾಪಿಸಿದ ದೇವಾಲಯದ ಅಡಿಪಾಯವು, ಇಷ್ಟು ವರ್ಷಗಳ ನಂತರವೂ ಹಾಗೇ ಉಳಿದಿರೋದೇ ನಿಜಕ್ಕೂ ಅಚ್ಚರಿ.
ಈ ಕ್ಷೇತ್ರಕ್ಕೆ ಬರುವವರು ಖಾಲಿ ಕೈಯಲ್ಲಿ ಹಿಂತಿರುಗಲ್ಲ ಎಂಬ ನಂಬಿಕೆ. ಛತ್ತೀಸ್ಗಢ ಮಾತ್ರವಲ್ಲ, ಬಿಹಾರ, ಜಾರ್ಖಂಡ್‌ನಿಂದಲೂ ಹಿಂದೂ-ಮುಸ್ಲಿಮರು ಒಟ್ಟಾಗಿ ಇಲ್ಲಿಗೆ ಬರ್ತಾರೆ. ನಂಬಿಕೆಯೋ ಇಲ್ಲ ಸ್ಥಳ ಶಕ್ತಿ ಅಥವಾ ಮಹಿಮೆ ಏನಾದ್ರೂ ಅನ್ನಿ. ಸೂಫಿ ಸಂತರು ತಮ್ಮೆಲ್ಲ ಇಷ್ಟಾರ್ಥ ಈಡೇರಿಸಿದ್ದಾರೆ ಅಂತಾರೆ ಭಕ್ತರು.
600 ವರ್ಷದ ಹಿಂದೆ ಸರ್ಗುಜಾ ರಾಜ್ಯ ಆಳುತ್ತಿದ್ದ ರಾಜ ರಘುನಾಥ್ ಶರಣ್ ಸಿಂಗ್‌ದೇವೊ ಅವರಿಗೆ ಸಂತಾನವಿರಲಿಲ್ಲ. ಅವರು ಟಕಿಯಾ ಶರೀಫ್ ಕ್ಷೇತ್ರಕ್ಕೆ ಭೇಟಿ ನೀಡಿ, ವಂಶ ಬೆಳಗಿದರೆ, ದೇವಾಲಯದ ಗೋಡೆ ನಿರ್ಮಿಸುವುದಾಗಿ ಹರಕೆ ಕಟ್ಟಿಕೊಂಡಿದ್ದರಂತೆ. ಅದರಂತೆ ರಾಣಿ ಗಂಡು ಮಗುವಿಗೆ ಜನ್ಮ ನೀಡಿದ್ರಂತೆ. ಹಾಗಾಗಿ, ರಾಜನು ದೇವಾಲಯದ ಕಾಂಪೌಂಡ್ ನಿರ್ಮಿಸಿದನಂತೆ. ಅದರ ಅವಶೇಷ ಇಂದಿಗೂ ಕಾಣಬಹುದು. ಟಕಿಯಾ ಶರೀಫ್ ದೇಗುಲ ಎಲ್ಲ ಧರ್ಮೀಯರನ್ನು ಸೇರಿಸುವ ಸೇತುವೆಯಾಗಿದೆ.