ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ವಿರುದ್ಧ ನಿರಂತರ ಹೋರಾಟದಲ್ಲಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಮಾಧ್ಯಮ ಸಿಬ್ಬಂದಿ ಸೇರಿದಂತೆ ಕೊರೊನಾ ಯೋಧರಿಗೆ ವಿಭಿನ್ನವಾಗಿ ಗೌರವ ಸಲ್ಲಿಸಲು ಭಾರತ ಸೇನಾ ಮುಖ್ಯಸ್ಥರು ಹಾಗೂ ರಕ್ಷಣಾ ಸಚಿವರು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇಂದು ಸಂಜೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(CDS) ಜನರಲ್ ಬಿಪಿನ್ ರಾವತ್ ಹಾಗೂ ದೇಶದ ಮೂರೂ ಮಾದರಿಯ ರಕ್ಷಣಾ ಪಡೆಯ ಮುಖ್ಯಸ್ಥರ ಸುದ್ದಿಗೋಷ್ಠಿ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್, ದೇಶದ ಸಶಸ್ತ್ರ ಪಡೆಗಳ ಪರವಾಗಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲ ಯೋಧರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ಮಾರಕ ಸೋಂಕಿನ ವಿರುದ್ಧ ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು, ಹೋಮ್ ಗಾರ್ಡ್, ಡೆಲಿವರಿ ಬಾಯ್ಸ್ ಮತ್ತು ಮಾಧ್ಯಮ ಮಿತ್ರರು ಇಂತಹ ಕಷ್ಟಕರ ಸನ್ನಿವೇಶದಲ್ಲೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸರ್ಕಾರದ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಕೊರೊನಾ ಹೋರಾಟಗಾರರ ಬೆನ್ನು ತಟ್ಟಿದರು.
ಕೊರೊನಾ ಯೋಧರಿಗೆ ಗೌರವ ಸಲ್ಲಿಸಲು ಕೆಲವು ವಿಶೇಷ ಚಟುವಟಿಕೆಗಳಿಗೆ ದೇಶವು ಸಾಕ್ಷಿಯಾಗಲಿದೆ. ಉತ್ತರದ ಶ್ರೀನಗರದಿಂದ ದಕ್ಷಿಣದ ತಿರುವನಂತಪುರಕ್ಕೆ ಹಾಗೂ ಅಸ್ಸಾಂನ ದಿಬ್ರುಗರ್ನಿಂದ ಗುಜರಾತ್ನ ಕಚ್ವರೆಗೆ 'ಫ್ಲೈಪಾಸ್ಟ್' ನಡೆಸಲು ವಾಯುಪಡೆ ಸಿದ್ಧವಾಗುತ್ತದೆ. ಈ ಮೂಲಕ ಸೇನೆಯು ಕೊರೊನಾ ಯೋಧರಿಗೆ ಗೌರವ ಸಲ್ಲಿಸಲಿದೆ. ಇದು ಸಾರಿಗೆ ಮತ್ತು ಯುದ್ಧ ವಿಮಾನಗಳನ್ನು ಒಳಗೊಂಡಿರುತ್ತದೆ. ಇದೇ ವೇಳೆ, ಕೆಲ ಸ್ಥಳಗಳಲ್ಲಿ ನಮ್ಮ 'ಫ್ಲೈಪಾಸ್ಟ್ ವಿಮಾನಗಳು ಹೂಮಳೆ ಸುರಿಯಲಿದೆ ಎಂದು ರಾವತ್ ತಿಳಿಸಿದ್ದಾರೆ.
ಸೇನೆಯು ನಮ್ಮ ದೇಶದ ಪ್ರತಿಯೊಂದು ಜಿಲ್ಲೆಯ ಕೆಲವು ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಮೌಂಟೇನ್ ಬ್ಯಾಂಡ್ ಪ್ರದರ್ಶನಗಳನ್ನು ನಡೆಸಲಿದೆ. ನಮ್ಮ ಪೊಲೀಸ್ ಪಡೆಗಳನ್ನು ಬೆಂಬಲಿಸಿ ಸಶಸ್ತ್ರ ಪಡೆಗಳು ಮೇ 3 ರಂದು ಪೊಲೀಸ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿವೆ ಎಂದು ರಾವತ್ ಹೇಳಿದ್ದಾರೆ.
ಸೇನಾ ಸಿಬ್ಬಂದಿ ಸೇಫ್ ಆಗಿದ್ದಾರೆ
ಸದ್ಯ ಕೊರೊನಾ ವೈರಸ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಯಾವುದೇ ತೊಂದರೆಗಳಿಲ್ಲ. ಸೇನೆಯ ಮೊದಲ ಕೊರೊನಾ ರೋಗಿ ಈಗಾಗಲೇ ಗುಣಮುಖರಾಗಿದ್ದಾರೆ. ಅಲ್ಲದೇ ಅವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸೇನೆಯಲ್ಲಿ ಇಲ್ಲಿಯವರೆಗೆ ಕೇವಲ 14 ಪ್ರಕರಣಗಳನ್ನು ಮಾತ್ರ ಪತ್ತೆಯಾಗಿದ್ದು, ಅದರಲ್ಲಿ ಐವರು ಗುಣಮುಖರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಎಂ ನರವಾನೆ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನಿಸುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರಿಂದಾಗಿ ಒಳನುಸುಳುವಿಕೆ ಪ್ರಯತ್ನಗಳ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್-19 ಕಾರಣದಿಂದಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಕಡಿಮೆಗೊಳಿಸಿಲ್ಲ. ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರನ್ನು ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ನರವಾನೆ ಹೇಳಿದರು. ಇದೇ ಮಾತನ್ನು ಸಿಡಿಎಸ್ ಬಿಪಿನ್ ರಾವತ್ ಕೂಡಾ ಪುನರುಚ್ಛರಿಸಿದ್ದಾರೆ.
ನಾವು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಇಲ್ಲಿಯವರೆಗೆ ಯಾವುದೇ ವಾಯುಸೇನಾ ಸಿಬ್ಬಂದಿಯಲ್ಲಿ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಆದರೆ, ನಮ್ಮ ಭದ್ರತೆಯನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್.ಭಡೌರಿಯಾ ಹೇಳಿದ್ದಾರೆ.
ಗಲ್ಫ್ ರಾಷ್ಟಗಳಲ್ಲಿ ನಮ್ಮ ದೇಶದ ದೊಡ್ಡ ಸಂಖ್ಯೆಯ ಜನರಿದ್ದಾರೆ. ಗಲ್ಫ್ ದೇಶಗಳಲ್ಲಿರುವ ನಮ್ಮ ನಾಗರಿಕರನ್ನು ಸ್ಥಳಾಂತರಿಸಲು ಸಿದ್ಧರಾಗಿರಲು ನಮ್ಮನ್ನು ಗಲ್ಫ್ ರಾಷ್ಟ್ರಗಳು ಕೇಳಿವೆ. ಆದ್ದರಿಂದ ನಾವು ನಮ್ಮ ಹಡಗುಗಳನ್ನು ಸಿದ್ಧಪಡಿಸಿದ್ದೇವೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಬಳಿಕ ಸಭೆ ನಡೆಸಿದ ಸೇನಾಮುಖ್ಯಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಕೊರೊನಾ ಹೋರಾಟಗಾರರಿಗೆ ವಿಭಿನ್ನ ರೀತಿಯಲ್ಲಿ ಧನ್ಯವಾದ ಸಲ್ಲಿಸುವ ಮೂಲಕ ಗೌರವ ಸಲ್ಲಿಸುವ ಕುರಿತಾಗಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ.