ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮಾನಗೇಡಿ ಕೃತ್ಯವೊಂದು ಬೆಳಕಿಗೆ ಬಂದಿದೆ. ಸುಖದೇವ್ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ, ಬಿಹಾರದ ದೊಡ್ಡ ರಾಜಕೀಯ ಪಕ್ಷದ ನಾಯಕನೆಂದು ಬಿಂಬಿಸಿಕೊಳ್ಳುವ ವ್ಯಕ್ತಿವೋರ್ವ, 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.
ಸುಖದೇವ್ ನಗರ ವ್ಯಾಪ್ತಿಯಲ್ಲಿ ಒಂದು ವಾರದೊಳಗೆ ಅಪ್ರಾಪ್ತೆಯರ ಮೇಲೆ ನಡೆದ ಎರಡನೇ ಅತ್ಯಾಚಾರ ಪ್ರಕರಣ ಇದಾಗಿದೆ. ಬಿಹಾರದ ಪ್ರಮುಖ ಪಕ್ಷದ ನಾಯಕ ಅರವಿಂದ್ ಕುಮಾರ್ ಜಸ್ವಾಲ್ ಮತ್ತು ಮಗುವಿನ ಕುಟುಂಬ ಸದಸ್ಯರು ಬಾಡಿಗೆಗೆ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು.
ಶುಕ್ರವಾರ ರಾತ್ರಿ ಬಾಲಕಿ ಮನೆಯಲ್ಲಿ ಒಂಟಿಯಾಗಿರುವುದನ್ನು ಕಂಡಿದ್ದ ಅರವಿಂದ್, ಚಾಕೊಲೇಟ್ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಬಾಲಕಿ ಮೂರ್ಛೆ ಹೋದಾಗ ಆರೋಪಿ ಆಕೆಯನ್ನು ಬಿಟ್ಟು ಓಡಿಹೋಗಿದ್ದಾನೆ. ವಿಷಯ ತಿಳಿದ ಬಾಲಕಿಯ ಕುಟುಂಬಸ್ಥರು ಸುಖದೇವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
![rape case in sukhdev nagar](https://etvbharatimages.akamaized.net/etvbharat/prod-images/9041264_rape.jpg)
ವಿಷಯ ತಿಳಿದ ಸ್ಥಳೀಯರು ಕೋಪಗೊಂಡು, ಆರೋಪಿ ಮನೆ ಮನೆ ಮುಂದೆ ಜಮಾಯಿಸಿದ್ದಾರೆ, ಅಷ್ಟೊತ್ತಿಗಾಗಲೇ ಆರೋಪಿ ಪರಾರಿಯಾಗಿದ್ದ. ಇದರಿಂದ ಮತ್ತಷ್ಟು ಕೆರಳಿದ ಜನ ಆತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಾರು ಮತ್ತು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಸಮಾಧಾನಪಡಿಸಿದರು. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.